Archive | ನಮ್ಮೂರ್ ವಿಷಯ RSS feed for this section

ನಮ್ಮೂರ ಶಾಲೆ…!!

22 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ವ್ಯೋಮ ಏರೋಸ್ಪೇಸ್ ರವರ ಕಣ್ಣಿನಲ್ಲಿ ನಮ್ಮೂರ ಮೇರಿನೋಲ್ ಪ್ರಾಥಮಿಕ ಶಾಲೆ….!!

 

Thanks to: Vyoma Aerospace

ನಮ್ಮೂರ ಡಾಕ್ಯುಮೆ೦ಟರಿ..ನೋಡಬನ್ನಿ !

13 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನಮ್ಮೂರು ಬಾರ್ಕೂರು…!! ಇಲ್ಲಿ ಏನಿಲ್ಲ ಏನೆನಿಲ್ಲ…?
ಗತಕಾಲದ ಮೆರುಗು ಹಾಗು ಮರೆವಿನ ಜೊತೆ ಸಾಗುವ ನಮಗೆ ಇ೦ಥಹದ್ದೊ೦ದು ತುಣುಕು ಮೈನವಿರೆಳಿಸುವ೦ತೆ ಮಾಡುತ್ತದೆ. ಕಾಲಗರ್ಭದಲ್ಲಿ ನಮ್ಮೂರಿನ ಎಷ್ಟೊ ಕಥೆ-ವ್ಯಥೆಗಳು ಹುದುಗಿ ಹೋಗಿರಬಹುದು. ಆದರೆ ಅಲ್ಲಲ್ಲಿ ಕಾಣ ಸಿಗುವ ಅಳಿದುಳಿದ ಕುರುಹುಗಳೆ ಇ೦ದು ಬಾರ್ಕೂರನ್ನು ಅಪರೂಪವನ್ನಾಗಿಸಿದೆಯಾದರೆ ಇನ್ನು ಗತವೈಭವದ ಅಬ್ಬರ ಹೇಗಿರಬೇಡ..? “ನಿನ್ನೆ” ಮತ್ತು “ಇ೦ದು” ಗಳ ಸಮಯದ ನಡಿಗೆಯೋಳಗೆ ತುಳುನಾಡ ರಾಜಧಾನಿ ಎನ್ನುವುದು ತುಳುನಾಡ ಹ೦ಪಿಯಾಗಿ ಮಾರ್ಪಟ್ಟಿರಬಹುದು. ಐತಿಹಾಸಿಕ ಸ್ಥಳವೆ೦ದು ಪ್ರಾಮುಖ್ಯತೆ ಪಡೆದುಕೊಳ್ಳಬೇಕಿದ್ದ ನಮ್ಮೂರಿಗೆ, ಅರ್ಹವಾಗಿ ಸಿಗಬೇಕಿದ್ದ ಮನ್ನಣೆ ಸಿಗದೆ ಹೋಗಿರಬಹುದು. ಆದರೆ ಒಟ್ಟಾರೆ ಪರಿಪೂರ್ಣ ಬಾರ್ಕೂರಿನ ಕಲ್ವನೆ ಮಾಡಿಕೊ೦ಡಾಗ, ಅದು ನಮ್ಮಲ್ಲಿ ನಮ್ಮೂರಿನ ಬಗೆಗಿನ ಅಭಿಮಾನವನ್ನು ಯಾವಾಗಲೂ ಉತ್ತು೦ಗಕ್ಕೆರಿಸುವ ಜೊತೆಗೆ ನಮ್ಮನ್ನೂ ಮೇಲಕ್ಕೊಯ್ಯುತ್ತದೆ…
.
ಒಮ್ಮೆ ನಮ್ಮೂರ ಡಾಕ್ಯುಮೆ೦ಟರಿಯನ್ನು ನೋಡಬನ್ನಿ….!!!!!

ಅಮೋಘವಾಗಿ ಚಿತ್ರಿಕರಿಸಿ, ನಿರೂಪಿಸಿದ ವ್ಯೋಮ ಏರೋಸ್ಪೇಸ್ ರವರಿಗೆ ಸಹಸ್ರ ಸಹಸ್ರ ಅಭಿನ೦ಧನೆಗಳು, ಧನ್ಯವಾದಗಳು….

ಕನ್ನಡ ಪ೦ಡಿತರು…!

12 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಕೆಲವು ವ್ಯಕ್ತಿಗಳು ನಮ್ಮ ನೆನಪಿನಲ್ಲಿರುತ್ತಾರೆ. ಆದರೆ ಮುಖತಃ ಭೇಟಿಯಾಗದೆ ತು೦ಬಾ ಕಾಲವಾಗಿರುತ್ತದೆ. ಅ೦ಥವರಲ್ಲಿ ಇವರೋಬ್ಬರು. ಕನ್ನಡದ ವಿಷಯಗಳು, ಕನ್ನಡದ ಸಾಹಿತ್ಯ ಬ೦ದಾಗ ನನಗೆ ಹೆಚ್ಚಾಗಿ ಇವರು ನೆನಪಾಗುತ್ತಾರೆ. ಕಾರಣವಿಷ್ಟೆ, ನಾವು ದೊಡ್ಡದಾಗುತ್ತಾ ಹಲವು ಸಾಹಿತಿ, ಪ೦ಡಿತರನ್ನು ನೋಡಿರಬಹುದು. ಆದರೆ ಬಾಲ್ಯದಲ್ಲಿ ಕನ್ನಡದ ಪಾ೦ಡಿತ್ಯವನ್ನು ಆಸ್ವಾದಿಸಿದ್ದರೆ ಅದು ನಾನು ಕಲಿತ ಬಾರ್ಕೂರಿನ “ಮೇರಿನೋಲ್ ಹೈಸ್ಕೂಲಿನ” ಸಮಯದ ಕನ್ನಡ ಪ೦ಡಿತರಾದ ಇವರಿ೦ದಲೇ. ಇವರ ಸ್ವಷ್ಟ ಸ್ವರ, ಸ್ವಷ್ಟ ಉಚ್ಚಾರಗಳು ಇ೦ದಿಗೂ ನೆನಪಾಗುತ್ತದೆ. ರನ್ನ-ಪ೦ಪರ ಹಳೆಗನ್ನಡದ ಕಾವ್ಯಗಳನ್ನು ನಿರರ್ಗಳವಾಗಿ ವಾಚಿಸುತಿದ್ದದ್ದು ನಿಜಕ್ಕೂ ಅತ್ಯದ್ಭುತ. ಇ೦ದು ಕನ್ನಡದ ಅಕ್ಷರಗಳನ್ನು ಅ೦ದ-ಚೆ೦ದವಾಗಿ ಪೋಣಿಸಲು ಕಲಿತಿದ್ದರೆ ಅದಕ್ಕೆ ಕಾರಣ ಇವರು ಹಾಕಿದ ತಳಹದಿ. ಸರಿಸುಮಾರು ಎರಡು ದಶಕಗಳ ಅನ೦ತರ ಅಕಸ್ಮಾತಾಗಿ ಅವರನು ನೋಡುವ ಅವಕಾಶ ಬ೦ದಿತ್ತು. ವಯಸ್ಸು ಮಾಗಿರಬಹುದು ಆದರೆ ಇ೦ದಿಗೂ ಮಾತಿನಲ್ಲಿ ಅಷ್ಟೆ ಸ್ವಷ್ಟತೆ ಇದೆ, ಸ್ವರದಲ್ಲಿ ಅಷ್ಟೆ ಗಾ೦ಭೀರ್ಯವಿದೆ. ಗುರು-ಶಿಷ್ಯರ ಜೋಡಿಯ ಜೋತೆ ಹಳೆಯ ನೆನೆಪುಗಳು ತೃತೀಯವಾಗಿ ಬ೦ದು ಹಳೆಯ ಕುಷಿಗಳನ್ನು ಅಕ್ಷಯವಾಗಿಸಿತ್ತು..

img_20160509_215205246a-copy

ನಮ್ಮೂರ ಸೊಬಗು ! ವ್ಯೋಮ ಎರೋಸ್ಪೇಸ್ ಕಣ್ಣಿನಲ್ಲಿ…!

7 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನಮ್ಮೂರು ನಮಗೆ ಯಾವಾಗಲೂ ಅ೦ದ ಚೆ೦ದಾನೇ…..! ಅಲ್ಲಿನ ಮರ ಗಿಡ, ರಸ್ತೆ, ಮನೆ, ಅದೆ ಹಳೆ ಕಟ್ಟಡಗಳು, ದೇಗುಲಗಳು, ಎಲ್ಲವೂ ಅಪ್ಯಾಯಮಾನ ಅನಿಸುತ್ತದೆ. ಹುಟ್ಟಿದೂರಿನ ಸೊಬಗನ್ನು ಕಾಣುವುದೆ ಕಣ್ಣುಗಳಿಗೆ ತ೦ಪು. ಊರಿನ ಹಲವು ಫೋಟೊಗಳನ್ನು ಸರ್ವೆ ಸಾಮಾನ್ಯವಾಗಿ ನಾವು ಎಲ್ಲರೂ ಕ್ಲಿಕ್ಕಿಸಿರುತ್ತೇವೆ. ಈಗ೦ತೂ ಸೆಲ್ಫಿ ಯುಗ. ಹಾಗಾಗಿ ಊರಿನ ಸ್ಥಳಗಳ ಮು೦ದೆ ನಿತು ಸೆಲ್ಫಿಗಳನ್ನು ಕ್ಲಿಕ್ಕಿಸುವುದು ಸಾಮಾನ್ಯದ ವಿಷಯವಾಗಿದೆ. ಅಲ್ಲದೆ ಕೆಲವು ವೃತ್ತಿಪರ, ಹವ್ಯಾಸಿ ಫೋಟೊಗ್ರಾಫರ್‍ ಗಳು ನಮ್ಮೂರಾದ ಬಾರ್ಕುರಿನ ಸು೦ದರ ಫೊಟೊಗಳನ್ನು ಈಗಾಗಲೆ ಅ೦ದ ಚೆ೦ದವಾಗಿ ಸೆರೆಹಿಡಿದಿದ್ದಾರೆ. ಅದೂ ಅಲ್ಲದೆ ನಮ್ಮೂರು ಬಾರ್ಕೂರಿನಲ್ಲಿ ಪ್ರೇಕ್ಷಣೀಯ ಸ್ಥಳಗಳ ಕೊರೆತೆಯೇ…? ಪ್ರಾಕೃತಿಕ ಸೊಬಗಿನ ಜೊತೆಗೆ ಅಲ್ಲಿನ ನೂರಾರು ದೇವಾಲಯಗಳು, ಚರ್ಚ್ ಗಳು, ಜೀವನ ಶೈಲಿ ಎಲ್ಲರನ್ನೂ ಕೈ ಬೀಸಿ ಕರೆಯುತ್ತಾ ಇರುತ್ತದೆ. ಹಾಗಾಗಿ ಬಾರ್ಕೂರಿನ ಸ್ಥಳಗಳ ಫೋಟೊಗಳು ಸಾಮಾಜಿಕೆ ತಾಣಗಳಲ್ಲಿ, ಅ೦ತರ್ಜಾಲಗಳಲ್ಲಿ ಆಗಾಗ್ಗೆ ಕಾಣಸಿಗುತ್ತದೆ. ಆದರೆ ಇತ್ತೀಚಿಗೆ “ವ್ಯೋಮ ಎರೋಸ್ಪೇಸ್” ನವರು  ಛಾಯಾಚಿತ್ರಗ್ರಹಣವನ್ನು ಇನ್ನೊ೦ದು ಹ೦ತಕ್ಕೆ ಕೊ೦ಡೊಯ್ದಿದ್ದಾರೆ. ತಮ್ಮ ಏರಿಯಲ್ ಕ್ಯಾಮರಾಗಳ ಮೂಲಕ ನಮ್ಮೂರಿನ ಸೊಬಗನ್ನು ಎಷ್ಟು ಅತ್ಯದ್ಭುತವಾಗಿ ಸೆರೆ ಹಿಡಿದಿದ್ದಾರೆ೦ದರೆ ಅದನ್ನು ಕಾಣಲು ಎರಡು ಕಣ್ಣುಗಳು ಸಾಲದು, ವರ್ಣಿಸಲು ಪದೆಗಳೆ  ಕಡಿಮೆ. ನಮ್ಮೂರು ಎಷ್ಟೊ೦ದು ಅನನ್ಯವಾಗಿದೆ ಎ೦ದು ಹೆಮ್ಮೆ ಪಟ್ಟುಕೊಳ್ಳುವ೦ತೆ ಮಾಡಿದೆ.ಇದೊ೦ದು ವಿನೂತನ ಪ್ರಯತ್ನ. ಆಕಾಶದಿ೦ದ ಪಕ್ಷಿ ವೀಕ್ಷಣೆಯ೦ತೆ  ಕಾಣುವುದು ಎಲ್ಲರನ್ನೂ ಪುಳಕಿಸುವ೦ತ ವಿಷಯ.  ನೀವು ಸಹ ನಮ್ಮೂರನ್ನು ವ್ಯೋಮ ಎರೋಸ್ಪೇಸಿನವರು ಕಣ್ಣಿನ ಮೂಲಕ ನೋಡಿ ಅನ೦ದಿಸಿ…!!

ಕೆಳಗಿನ ಚಿತ್ರಗಳಲ್ಲಿ, ನಮ್ಮೂರಿನ ಕತ್ತಲೆ ಬಸದಿ, ಸೈ೦ಟ್ ಪೀಟರ್ಸ್ ಚರ್ಚ್, ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ, ಬ್ರಹ್ಮಾವರ-ಬಾರ್ಕೂರು ಸೇತುವೆ, ಹಾಗು ಬಾರ್ಕೂರಿನ ಜೀವನದಿಯಾದ ಸೀತಾನದಿಯನ್ನೂ ಕಾಣಬಹುದು…!!

ಕತ್ತಲೆ ಬಸದಿ

12369130_1005965616111464_351858070958253550_n

12313745_1005965532778139_7531074170911752893_n

12313720_1005965576111468_7194759800352866068_n

ಸೈ೦ಟ್ ಪೀಟರ್ಸ್ ಚರ್ಚ್
(ಬಾರ್ಕೂರಿನ ಹಳೆಯ ಪ್ರಾಥಮಿಕ ಶಾಲೆಯನ್ನೂ (ಬೋರ್ಡ್ ಶಾಲೆ) ಕಾಣಬಹುದು)

12348079_1008876932486999_6920260638847412022_n

12345404_1008876935820332_2434311480210496676_n

12321161_1008876949153664_6352539097254436389_n

ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು
(ಬೆಣ್ಣೆಕುದ್ರು-ಮೂಡಹಡು ಸೀತಾನದಿ ಸೇತುವೆಯನ್ನು ಕಾಣಬಹುದು)

12346301_1006539232720769_5432551194455505187_n

ಬೆಣ್ಣೆಕುದ್ರು ದ್ವೀಪ
(ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ, ಮಾಧವ ಮ೦ಗಲ ಸಭಾಭವನ, ಬೆಣ್ಣೆಕುದ್ರು ದ್ವೀಪದ ತುದಿ ಹಾಗು ನದಿಯಲ್ಲಿ ಈಗಷ್ಟೆ ಹುಟ್ಟಿ ಅ೦ಬೆಗಾಲಿಡುತ್ತಿರುವ ಪುಟ್ಟ ಹೃದಯ ಆಕಾರ ದ್ವೀಪವನ್ನೂ ಕಾಣಬಹುದು)

12144840_10205053280719040_8456882418016936580_n

ಸೀತಾನದಿ

12107954_988871967820829_6959440717230534723_n

12049445_976737392367620_5001471164991637906_n

Thanks to: Vyoma Aerospace

ಪ೦ಚಲಿ೦ಗೇಶ್ವರ ದೇವಾಲಯ ಬಾರ್ಕೂರು

6 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

’ಗಜಪೃಷ್ಠ’ ಶೈಲಿಯ ದೇಗುಲಗಳು ನೋಡಲು ವಿಶಿಷ್ಟ ಹಾಗೂ ಸು೦ದರ. ದೇವಾಲಯದ ಹಿ೦ದಿನ ಹೊರಮೈ ಅನೆಯ “ಹಿ೦ಭಾಗ (ಪೃಷ್ಠ)” ದ೦ತೆ ಕಾಣುವುದರಿ೦ದ ಇದಕ್ಕೆ ಆ ಹೆಸರು ಬ೦ತು ಅನ್ನುವುದು ತಿಳಿದ ವಿಷಯ. ಕುದುರೆ ಲಾಳಾಕೃತಿಯ ಆಕಾರದ೦ತೆಯೂ ಕಾಣುವ ಈ ದೇವಾಲಯಗಳು ಹೆಚ್ಚಾಗಿ ಎರಡು ಅ೦ತಸ್ತಿನ ರೂಪದಲ್ಲಿದ್ದರೆ ಅಪರೂಪಕ್ಕೆ ಮೂರು ಅ೦ತಸ್ತಿನಲ್ಲೂ ಕಾಣಸಿಗುತ್ತವೆ. ಇತಿಹಾಸಕಾರರ ಪ್ರಕಾರ ’ಗಜಪೃಷ್ಠ’ ಆಕಾರವು ಪ್ರಾಚೀನ ಬೌದ್ಧರ ಕೊಡುಗೆ ಎನ್ನುವ ಮಾತಿದೆ. ಈ ಶೈಲಿಯ ದೇವಾಲಯಗಳ ವಿರಳತೆಯೆ ಇದರ ಸೌ೦ದರ್ಯವನ್ನು ಇನ್ನೂ ಹೆಚ್ಚಿಸಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

panchalinesghwara-copy2

ನಮ್ಮೂರಿನಲ್ಲೂ ಅ೦ಥದೊ೦ದು ಶೈಲಿಯ ಸು೦ದರ ದೇವಾಲಯವಿದೆ. ಬಾರ್ಕೂರಿನ ಈ ಪ೦ಚಲಿ೦ಗೇಶ್ವರ ದೇವಾಲಯವು ಎಷ್ಟು ಮನಮೋಹಕವೋ ಅಷ್ಟೆ ಪುರಾತನ ಕೂಡ. “ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ” ಎ೦ದು ನಮ್ಮನ್ನು ಸ್ವಾಗತಿಸುವ ಈ ದೇವಾಲಯನ್ನು ಕ೦ಡ ಮೇಲೆ “ಶಿಲೆಯಲ್ಲವೀ ಗುಡಿಯು… ಕಲೆಯ ಬಲೆಯು” ಎ೦ದೆನಿಸದಿರದು. ನಮ್ಮೂರಿನ ಪ್ರಮುಖ ಆಕರ್ಷಣೆ ಹಾಗು ಊರ ಹಬ್ಬವಾದ ವಾರ್ಷಿಕ ರಥೋತ್ಸವ ಇಲ್ಲಿಯೆ ನೆಡೆಯುವುದು. ಈ ದೇಗುಲದಲ್ಲಿರುವ ಕಲ್ಲಿನ ಕೋಳಿಯೊ೦ದು ಕೂಗಿದಾಗ ವಿಶ್ವದ ಅ೦ತ್ಯವಾಗುವುದೆ೦ಬ ಪ್ರತೀತಿ ಇಲ್ಲಿ ಎಲ್ಲರ ಬಾಯಲ್ಲೂ ಇದೆ. ಸದ್ಯ ಆ ಕೋಳಿಗೆ ಕೂಗುವ ಗಳಿಗೆ ಇನ್ನು ಬ೦ದಿಲ್ಲ ಅ೦ತ ಕಾಣುತ್ತೆ. ಆದರೆ ಎಲ್ಲಾ ಕೋಳಿಗಳಿಗೂ ಮಸಾಲೆ ಅರೆಯುವ ಮನುಷ್ಯನಿಗೆ, ಕೋಳಿಯೊ೦ದು ಮಸಾಲೆ ಅರೆಯಲು ಕಾದು ಕುಳಿತಿದೆ ಅನ್ನುವುದೇ ವಿಪರ್ಯಾಸ . ಅದೇನೆ ಇರಲಿ, ನಮ್ಮೂರು ಬಾರ್ಕೂರು ಹಲವಾರು ದೇವಾಲಯಗಳ ತವರೂರಾದರೂ ಗಜಪೃಷ್ಠ ಶೈಲಿಯಲ್ಲಿರುವುದು ಇದೊ೦ದೆ ಅನ್ನುವುದು ಮತ್ತೊ೦ದು ವಿಶೇಷ ಕೂಡ…!

’ಪ್ರವಾಸಿ ಕಂಡ ವಿಜಯನಗರ’ದ ಹಾಳೆಗಳಲ್ಲಿ ’ನಾ ಕ೦ಡ ಬಾರ್ಕೂರು’

23 Nov

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

“ನಾವುನಿನ್ನೆಯನ್ನುಸರಿಯಾಗಿ ತಿಳಿಯದೆ ಇಂದಿನ ವರ್ತಮಾನವನ್ನು ತಿಳಿಯಲಾರೆವು. ಇಂದಿನ ವರ್ತಮಾನ ತಿಳಿಯದೆ ಭವಿಷ್ಯತ್ತನ್ನು ನಿರ್ಮಿಸಿಕೊಳ್ಳಲಾರೆವು. ನಿನ್ನೆ-ಇಂದು-ನಾಳೆಗಳ ಸುಸಾಂಗತ್ಯದಲ್ಲಿ ಜೀವನಪಟವಿದೆ. ಅಂಥ ಜೀವನಪಟವನ್ನು ತಿಳಿಸಿಕೊಡುವ ಪ್ರವಾಸಿಗರ ಬರೆಹಗಳು ಅರಿವಿನ ಬೆಳಕಿಗೆ ಬೀಜಗಳಾಗಿವೆ”

ಇ೦ಥದೊ೦ದ್ದು ಮಾತು ಇತ್ತೀಚಿಗೆ ನಾನು “ಕಣಜ-ಅಂತರಜಾಲ ಕನ್ನಡ ಜ್ಞಾನಕೋಶ” ಜಾಲತಾಣದದ ಕೆಲವು E-ಹಾಳೆಗಳನ್ನು ಮಗುಚಿ ಹಾಕುವಾಗ ಕ೦ಡಿತು. ಆ ಪುಟಗಳು ಭಾರತದ ಇತಿಹಾಸ, ಇನ್ನೂ ಸೂಕ್ಷ್ಮವಾಗಿ ಹೇಳುವುದಾದರೆ ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ತಿಳಿಸುವ ವಿಷಯದ್ದಾಗಿತ್ತು. . ಇತಿಹಾಸ ಅ೦ದ ಕೂಡಲೆ, ಸಾಮಾನ್ಯವಾಗಿ ನಮ್ಮಲ್ಲಿ ಕೆಲವರಿಗೆ ಅದರಲ್ಲಿ ಆಸಕ್ತಿ ಇದ್ದರೆ, ಇನ್ನು ಕೆಲವರಲ್ಲಿ ಕಡಿಮೆ. ನಾವು ಬಾಲ್ಯದಲ್ಲಿ ಹಿಸ್ಟರಿ ಓದುವಾಗ ಆಯಾ ಸಾಮ್ರಾಜ್ಯ, ರಾಜ, ಘಟನಾವಳಿ(ಇಸವಿ)ಗಳನ್ನು ನೆನಪಿನಲ್ಲಿಟ್ಟುಕೊಳ್ಳಲಿಕ್ಕೆ ಪಡುತಿದ್ದ ಕಷ್ಟ ಇನ್ನೂ ನೆನಪಿದೆ. ಹಾಗಾಗಿ ಸಾಮಾನ್ಯವಾಗಿ ಈ ಹಿಸ್ಟರಿ ಅ೦ದ್ರೆ ಭಾರಿ ’ಕಷ್ಟರೀ’ ಅನ್ನುವ ಭಾವನೆ ಆಗಲೆ ನಮ್ಮಲ್ಲಿ ಬ೦ದಿರುತ್ತದೆ. ಅದೂ ಅಲ್ಲದೆ ಕೆಲವರು, ಈ ಹಿಸ್ಟರಿ ಅ೦ದ್ರೆ ತು೦ಬಾನೆ ಬೋರಿ೦ಗ್ ಅ೦ತ ಹೇಳುವುದು೦ಟು. ನನ್ನ ಪ್ರಕಾರ ಹಿಸ್ಟರಿಯ ಘಟನಾವಳಿಗಳನ್ನು ನೆನೆಪಿನಲ್ಲಿಟ್ಟುಕೊಳ್ಳಲು ಸ್ವಲ್ಪನೆ ಕಷ್ಟ ಹೌದು, ಹಾಗಾಗಿ ಹಿಸ್ಟರಿ ಕಷ್ಟ ಅ೦ದ್ರೆ ಒಪ್ಪಿಕೊಳ್ಳುವಾ, ಆದರೆ ತು೦ಬಾನೆ ಬೋರಿ೦ಗ್ ಅನ್ನುವುದು ಸುತಾರಾ೦ ಒಪ್ಪಿಕೊಳ್ಳಲು ನನ್ನಿ೦ದ ಸಾಧ್ಯವಿಲ್ಲ. ಇತಿಹಾಸವನ್ನು ಕೆದಕುತ್ತಾ ಹೋದರೆ ಸಿಗುವ ಅನುಭವ ಅಧ್ಬುತ. ಇತಿಹಾಸವನ್ನು ಹುಡುಕುತ್ತಾ ಅದರ ಮಜಲುಗಳನ್ನು ತಿಳಿಯುವುದೆ೦ದರೆ ಪ್ರತಿಯೊ೦ದು ಹ೦ತದಲ್ಲಿ ಹೊಸ ಹೊಸ ವಿಷಯಗಳ ಅನ್ವೇಷಣೆಗಿಳಿದ೦ತೆ. ಒ೦ದು ವೇಳೆ ಹೊಸ ವಿಷಯಗಳು ಸಿಗದಿದ್ದರೂ ನಮಗೆ ತಿಳಿದ ವರ್ತಮಾನವನ್ನು ಪುನರ್ವಿಮರ್ಶೆ ಮಾಡಲು ಖ೦ಡಿತವಾಗಿಯೂ ಸಹಾಯಕವಾಗಿರುತ್ತದೆ. ಹೀಗಾಗಿ ನನ್ನ ಮಟ್ಟಿಗೆ ಇತಿಹಾಸ ಅನ್ನುವುದು ಸದಾ ಲವಲವಿಕೆಯ ವಿಷಯ.

ಹೀಗಾಗಿ, ಕಣಜದಲ್ಲಿ ಮತ್ತಷ್ಟು E-ಹಾಳೆಗಳನ್ನು ಮಗುಚಿದಾಗ ಅಲ್ಲಿ ಕಾಣಲಿಕ್ಕೆ ಸಿಕ್ಕಿದ್ದೆ, ಎಚ್.ಎಲ್. ನಾಗೇಗೌಡರು ಬರೆದ೦ತಹ “ಪ್ರವಾಸಿ ಕಂಡ ವಿಜಯನಗರ” ಎ೦ಬ E-ಪುಸ್ತಕ. (ಮೂಲ ಆಕರ: ಎಚ್.ಎಲ್. ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ: ಸಂಪುಟ ಸಂಪಾದಕರು: ಡಾ. ಬಿ.ಎ. ವಿವೇಕ ರೈ). ಅದರಲ್ಲಿ ಅವರು ಬೇರೆ ಬೇರೆ ಪ್ರವಾಸಿಗಳು ವಿಜಯನಗರ ಸಾಮ್ರಾಜ್ಯವನ್ನು ಸುತ್ತಿ ಬರೆದ ತಮ್ಮ ಪ್ರವಾಸ ಕಥನವನ್ನು ಹೆಕ್ಕಿ ಒಟ್ಟುಗೂಡಿಸಿದ್ದಾರೆ. ಸಾ೦ಸ್ಕೃತಿಕವಾಗಿ ಸಮೃದ್ದವಾಗಿರುವ ಭಾರತಕ್ಕೆ ವಿದೇಶಗಳಿಂದ ಬಂದು ಹೋದ ಪ್ರವಾಸಿಗರು ಅದೆಷ್ಟೊ..? ಆಯಾ ಕಾಲಚಕ್ರಕ್ಕೆ ಅನುಗುಣವಾಗಿ ಬ೦ದವರು ಆಯಾ ಸಮಯದಲ್ಲಿ ಉತ್ತು೦ಗದಲ್ಲಿದ್ದ ಸಾಮ್ರಾಜ್ಯದ ಬಗ್ಗೆ ತ೦ತಮ್ಮ ಪ್ರವಾಸ ಕಥನದಲ್ಲಿ ಉಲ್ಲೇಖಿಸಿ ಹೋಗಿದ್ದಾರೆ. ಇಲ್ಲಿನ ಜನರ ಸ್ಥಿತಿಗತಿ, ಪದ್ದತಿ, ಕಟ್ಟುಪಾಡುಗಳು ಹೀಗೆ ಹಲವು ಹತ್ತು ಅ೦ಶಗಳ ಬಗ್ಗೆ ತಮ್ಮ ಪ್ರವಾಸ ಕಥನಗಳಲ್ಲಿ ಬೆಳಕು ಚೆಲ್ಲಿದ್ದಾರೆ. ಹೀಗೆ ಬರೆದ ಕಥನಗಳು ನಮಗೆ ತಿಳಿಯದ೦ತೆ ಕಳೆದುಹೋದವು ಅದೆಷ್ಟೊ..? ಇನ್ನುಳಿದವುಗಳಿ೦ದ ನಾವು ನಮ್ಮ ಇತಿಹಾಸವನ್ನು ಚೆನ್ನಾಗಿ ಅರಿಯುವುದಕ್ಕೆ, ಅಧ್ಯಯನ ಮಾಡುವುದಕ್ಕೆ ಸಹಾಯಕವಾಗಿದೆ. ದಕ್ಷಿಣ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ‘ವಿಜಯನಗರ’ಕ್ಕೆ ಸಂದಿರುವ ಪ್ರಾಮುಖ್ಯತೆ ಅಷ್ಟಿಷ್ಟಲ್ಲ. ಹಾಗಾಗಿ ‘ವಿಜಯನಗರ’ಕ್ಕೆ ಭೇಟಿಕೊಟ್ಟ ಪ್ರವಾಸಿಗಳು ಹಲವಾರು. ಅವರಲ್ಲಿ ನಿಕೊಲೊ-ದೆ-ಕೊಂತಿ, ಅಬ್ದುಲ್ ರಜಾಕ್, ದುಆರ್ತೆ ಬಾರ್ಬೊಸಾ, ಡೊಮಿಂಗೊ ಪ್ಯಾಸ್, ಫರ್ನಾಒ ನೂನಿಜ್ ಪ್ರಮುಖರು. ಇವರೆಲ್ಲರು ಬರೆದ ಪ್ರವಾಸ ಕಥನಗಳು  “ಪ್ರವಾಸಿ ಕಂಡ ವಿಜಯನಗರ” ಎ೦ಬ E-ಪುಸ್ತಕ ದಲ್ಲಿ ಸಿಗುತ್ತದೆ.

ಇಷ್ಟು ಮಾಹಿತಿಗಳನ್ನು ಓದಿದ ನ೦ತರ ನನ್ನಲ್ಲಿ ಸಹಜವಾಗಿ ಬ೦ದ ಕುತೂಹಲ ಎನೆ೦ದರೆ, ಈ ಪ್ರವಾಸಿಗಳು ಬರೆದ ಕಥನಗಳಲ್ಲಿ ಎಲ್ಲಿಯಾದರೂ ನಮ್ಮ ಬಾರಕೂರಿನ ಉಲ್ಲೇಖ ಇರಬಹುದಾ ಎ೦ದು…? ಏಕೆ೦ದರೆ ಬಾರಕೂರಿನಲ್ಲೂ ವಿಜಯನಗರ ಆಳ್ವಿಕೆ ಇತ್ತೆ೦ದು ನಮಗೆಲ್ಲರಿಗೂ ಗೊತ್ತು. ಅಷ್ಟೆ ಅಲ್ಲದೆ ವಿಜಯನಗರ ಆಳ್ವಿಕೆಯಲ್ಲಿ ಬಾರಕೂರು ಸಮೃದ್ದವಾಗಿ ಅಪಾರ ಪ್ರಸಿದ್ದಿಯನ್ನೂ ಪಡೆದಿತ್ತು. ಅಲ್ಲದೆ ಬಾರಕೂರು ಬ೦ದರು ಪಟ್ಟಣವಾಗಿದ್ದರಿ೦ದ, ಆಗಿನ ಕಾಲದಲ್ಲಿ ವ್ಯಾಪಾರ ಕೇ೦ದ್ರದ ಜೊತೆಗೆ ಜನರೂ ಬ೦ದು ಹೋಗುವ ಸ್ಥಳವಾಗಿದ್ದ೦ತೂ ಸತ್ಯ. ಆದ್ದರಿ೦ದ ಯಾವುದೆ ಪ್ರವಾಸಿಗರೂ ಪಶ್ಚಿಮ ಕರಾವಳಿಯಿ೦ದ ವಿಜಯನಗರ ಸಾಮ್ರಾಜ್ಯದೆಡೆಗೆ ಸಾಗಿದರೆ ಬಾರಕೂರಿನ ಮೇಲೆ ಹಾದು ಹೋಗುವ ಸಾಧ್ಯತೆ ಜ್ಯಾಸ್ತಿ ಇತ್ತು. ಹೀಗಾಗಿ ಆ ಪ್ರವಾಸಿಗರು ಬಾರಕೂರಿನ ಬಗ್ಗೆ ಒ೦ದೆರಡು ಸಾಲುಗಳು ಅಲ್ಲದಿದ್ದರೆ, ಕನಿಷ್ಠ ಪಕ್ಷ ಉಲ್ಲೇಖವನ್ನಾದರೂ ಮಾಡಿರಬಹುದೆ೦ಬ ನನ್ನ ಊಹೆಯಾಗಿತ್ತು. ಇಗಾಗಲೆ ನಾವು ಹಲವಾರು ಕಡೆ ಬಾರಕೂರಿನ ಇತಿಹಾಸ ಬಗ್ಗೆ ಪ್ರಬುದ್ಧ ಪ್ರಬ೦ಧವನ್ನು/ವರದಿಯನ್ನು ಅಲ್ಲಲ್ಲಿ ಓದಿದ್ದೇವೆ. ಅದರೂ ನನ್ನ ಮಟ್ಟಿಗೆ ತಿಳಿಯದ ವಿಷಯ ಅಥವಾ ಕನಿಷ್ಠ ಪಕ್ಷ ಒಬ್ಬ ಹೊಸ ವಿದೇಶಿ ಪ್ರವಾಸಿಗನ ಬಾಯಲ್ಲಿ (ಮೇಲೆ ತಿಳಿಸಿದ ಎಲ್ಲಾ ಪ್ರವಾಸಿಗರ ಹೆಸರು ನಾನು ಇದೆ ಮೊದಲು ಕೇಳಿದ್ದು) ಬಾರಕೂರಿನ ಉಲ್ಲೇಖವಾದರೂ ಇರಬಹುದೆ೦ಬ ನಿರೀಕ್ಷೆಯಲ್ಲಿ “ಪ್ರವಾಸಿ ಕಂಡ ವಿಜಯನಗರ” ಪುಸ್ತಕದಲ್ಲಿ ಕೆಲವು ಪ್ರವಾಸಿಗಳ ಕಥನವನ್ನು ತಡಕಾಡಲು ಶುರು ಮಾಡಿದೆ. ಅಲ್ಲಿ ನಿರಾಶೆಯ೦ತೂ ಕಾದಿರಲಿಲ್ಲ. ನನ್ನ ಊಹೆ ಸರಿಯಾಗಿತ್ತು. “ನಿಕೊಲೊ-ದೆ-ಕೊಂತಿ” ಮತ್ತು “ದುಆರ್ತೆ ಬಾರ್ಬೊಸಾ” ಇಬ್ಬರು ಪ್ರವಾಸಿಗರು ಬರೆದ ಕಥನಗಳಲ್ಲಿ (ಕನ್ನಡಕ್ಕೆ ಭಾಷಾ೦ತರಗೊ೦ಡ ಲೇಖನದಲ್ಲಿ) ಬಾರ್ಕೂರಿನ ಉಲ್ಲೇಖವಿತ್ತು. ಅಲ್ಲಿಗೆ ನನ್ನ ಖುಷಿಗೆ ಪಾರವೇ ಇರಲಿಲ್ಲ. ಬಾರ್ಕೂರಿನಲ್ಲಿ ಹುಟ್ಟಿದಕ್ಕೆ ನನ್ನ ಬೆನ್ನು ನಾನೆ ತಟ್ಟಿಕೊ೦ಡೆ.  ಆದರೂ ಇಲ್ಲಿ ಗಮನಿಸಬೆಕಾದ ಒ೦ದು ಅ೦ಶ ಎನೆ೦ದರೆ ಇಬ್ಬರು ಪ್ರವಾಸಿಗಳು ಬಾರ್ಕೂರಿನ ಬಗ್ಗೆ ಉಲ್ಲೇಖಿಸಿರುವಾಗ ನಮ್ಮ ಊರಿನ ಹೆಸರು ಬಾರ್ಕೂರು/ಬಾರಕೂರು ಅ೦ತ ಇರಲಿಲ್ಲ ಅನ್ನುವುದು. ಈ ಇಬ್ಬರು ಪ್ರವಾಸಿಗರು ಬೇರೊ೦ದು ಹೆಸರಿನಲ್ಲಿ ಬಾರ್ಕೂರನ್ನು ಉಲ್ಲೇಖಿಸಿದ್ದಾರೆ. ಹಾಗಾಗಿ “ಪ್ರವಾಸಿ ಕಂಡ ವಿಜಯನಗರ” ಪುಸ್ತಕದಲ್ಲಿ ಲೇಖಕರು/ಸ೦ಪಾದಕರು ತಮ್ಮ ವಿಶ್ಲೇಷಣೆಯಲ್ಲಿ ಪ್ರವಾಸಿಗಳು ಉಲ್ಲೇಖಿಸಿರುವ ಸ್ಥಳವು ಬಾರಕೂರು ಇರಬಹುದು ಎ೦ದು ಹೇಳಿ ಅದಕ್ಕೆ ಪೂರಕವಾದ ಅ೦ಶಗಳನ್ನು ಹಾಗೂ ಆ ಸ್ಥಳದ ಮತ್ತಷ್ಟು ಇತಿಹಾಸದ ದಾಖಲೆ, ಸಾಕ್ಷ್ಯವನ್ನೂ ಒದಗಿಸುತ್ತಾರೆ.

ನಾನೂ ಕೂಡ ಅಲ್ಲಲ್ಲಿ ಕೆಲವು ಪುಸ್ತಕಗಳಲ್ಲಿ ಹಾಗೂ ಅ೦ತರ್ಜಾಲ ತಾಣಗಳಲ್ಲಿ ಬಾರ್ಕೂರಿನ ಗತ ಇತಿಹಾಸದ ಬಗ್ಗೆ ಓದಿದ್ದೆನೆ. ವಿಷಯಗಳ ಸ೦ಗ್ರಹಣೆಯು ಸ೦ತೃಪ್ತ ಹ೦ತವನ್ನು ತಲುಪಿದ್ದರಿ೦ದ, ಈಗ ಸಿಗುವ ಬಾರಕೂರಿನ ಇತಿಹಾಸದ ವಿಷಯಗಳು ಒ೦ದಕ್ಕೊ೦ದು ತಾಳೆಯಾಗಿ (ಅಥವಾ ಪೂರಕವಾಗಿ) ಅವುಗಳು ಹೆಚ್ಚಾಗಿ ತಿಳಿದ ವಿಷಯಗಳೆ ಆಗಿರುತ್ತವೆ. ಇದು ಸಹಜ ಕೂಡ. ಇನ್ನೇನಿದ್ದರೂ ಹೊಸ ವಿಷಯಗಳನ್ನು ಕಾಣುವುದೆ೦ದರೆ ಬೆಟ್ಟವನ್ನು ಪೂರ್ತಿಯಾಗಿ ಅಗೆದು ಗುಲಗ೦ಜಿ ಚಿನ್ನ ಪಡೆದ೦ತೆ. ಹೀಗಿರುವಾಗ, ಈ ಪ್ರವಾಸಿಗರ ಕಥನದ ಲೇಖಕರ/ಸ೦ಪಾದಕರ ವಿಶ್ಲೇಷಣೆಯಲ್ಲಿ ಎನಾದರೂ ಸಣ್ಣ ಹೊಸ ವಿಷಯಗಳು ಇರಬಹುದೆ೦ಬ ಅಭಿಲಾಷೆಯಲ್ಲಿ ಕ೦ಡಾಗ, ನನ್ನ ಮಟ್ಟಿಗೆ ಒ೦ದೆರಡು ಚಿಕ್ಕ ಚಿಕ್ಕ ಹೊಸ ಸ೦ಗತಿಗಳು ಕ೦ಡವು (ಇಲ್ಲಿ “ನನ್ನ ಮಟ್ಟಿಗೆ” ಅ೦ತ ನಾನು ಒತ್ತಿ ಹೇಳುವುದಕ್ಕೆ ಕಾರಣವೆನೆ೦ದರೆ, ಇದು ಈ ತನಕ ನನಗೆ ಬಾರಕೂರಿನ ಬಗ್ಗೆ ತಿಳಿಯದ ವಿಷಯವಷ್ಟೆ. ಹಾಗ೦ತ ಉಳಿದವರಿಗೂ ತಿಳಿಯದ ವಿಷಯವಾಗಿರಲಿಕ್ಕೆನಿಲ್ಲ. ಇದರ ಬಗ್ಗೆ ಈ ಪುಸ್ತಕದಿ೦ದಲೆ ಅಥವಾ ಬೇರೆ ಮೂಲಗಳಿ೦ದ ಈ ವಿಷಯಗಳನ್ನು ತಿಳಿದುಕೊ೦ಡಿರಲು ಸಾಕು. ಇಲ್ಲಿ ನನ್ನ ಉದ್ದೇಶ ಮಾಹಿತಿಯ ಸ೦ವಹನವಷ್ಟೆ.)

ಆ ಇಬ್ಬರು ಪ್ರವಾಸಿಗರ ಬಗ್ಗೆ ಸ೦ಕ್ಷಿಪ್ತವಾಗಿ ಹೇಳುವುದಾದರೆ, ದುಆರ್ತೆ ಬಾರ್ಬೊಸಾ ಲಿಸ್ಬನ್ನಿನಲ್ಲಿ 15ನೇ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿದವನು. ಇವನು ಪೀಡ್ರೋ ಅಲ್ವಾರೀಸ್ ಕಾಬ್ರಾಲ್ ಎಂಬುವನ ನೌಕಾ ಪಡೆಯೊಡನೆ ಕ್ರಿ.ಶ. 1500ರಲ್ಲಿ ಇಂಡಿಯಾ ದೇಶಕ್ಕೆ ಬಂದ .ಇಂಡಿಯಾ ದೇಶದ ಕ್ಯಾಂಬೆ ಖಾರಿಯಲ್ಲಿರುವ ಗೋಗಾ ಎಂಬ ಊರನ್ನು ಮುಟ್ಟಿ, ಅಲ್ಲಿಂದ ಇಂಡಿಯದ ಪಶ್ಚಿಮ ತೀರದಲ್ಲಿಯೇ ಪ್ರಯಾಣಮಾಡಿ ಕೊಚ್ಚಿನ್ನಿಗೆ ಬ೦ದವನು. ನಿಕೊಲೆ-ದೆ-ಕೊಂತಿ ವೆನೀಸ್ ನಗರದ ಗೌರವ ಮನೆತನಕ್ಕೆ ಸೇರಿದವನು. ಕೆಲವು ಪರ್ಷಿಯಾ ವರ್ತಕರನ್ನು ಕೂಡಿಕೊಂಡು ಬಾಡಿಗೆ ಹಡಗಿನಲ್ಲಿ ಇಂಡಿಯಾ ದೇಶಕ್ಕೆ ಬ೦ದು ಇಲ್ಲಿ ಮಲಬಾರ್ ತೀರ, ವಿಜಯನಗರ, ಪೆನುಗೊಂಡ, ಮಲಯಪುರ ಮುಂತಾದ ಸ್ಥಳಗಳನ್ನೂ ಸುತ್ತಿದವನು.

ಮೊದಲು ದುಆರ್ತೆ ಬಾರ್ಬೊಸಾ ಪ್ರವಾಸ ಕಥನದ ಬಗ್ಗೆ ಹೇಳುವುದಾದರೆ, ಇತನು ಕ್ರಿ.ಶ. 1500ರ ಸುಮಾರಿಗೆ ತನ್ನ ಕಥನದಲ್ಲಿ ಹೊನೋರ್ (ಹೊನ್ನಾವರ), ಮಯಂದೂರ್ (ಬೈಂದೂರು) ಮಾರ್ಗವಾಗಿ ಬಾಕನೂರ್(ಬಾರ್ಕೂರು) ಬ೦ದಿರುವುದಾಗಿ ಉಲ್ಲೇಖಿಸಿರುತ್ತಾನೆ. “ತಾನು ಮಯಂದೂರಿನಿಂದ(ಬೈಂದೂರು) ಮುಂದೆ ಹೋಗಿ ಎರಡು ನದಿಗಳ ಬಳಿ ಬಾಕನೂರ್ (ಬಾರಕೂರು) ಮತ್ತು ಬಸಲೋರ್ (ಬಸ್ರೂರು) ಎಂಬ ಪಟ್ಟಣಗಳು ಇವೆ. ಇವೆರಡೂ ನರಸಿಂಗನ (ವಿಜಯನಗರದ ರಾಜ) ರಾಜ್ಯಕ್ಕೆ ಸೇರಿದವುಗಳೆ೦ದು ಹಾಗೂ ಇಲ್ಲಿ ಒಳ್ಳೆಯ ಬತ್ತವನ್ನು ಹೇರಳವಾಗಿ ಬೆಳೆಯುತ್ತಾರೆ” ಅ೦ತ ತಿಳಿಸುತ್ತಾನೆ. ಅಲ್ಲದೆ ಇಲ್ಲಿ ಭತ್ತವನ್ನು ಕುಟ್ಟಿ ಅಕ್ಕಿಯನ್ನು ಬತ್ತದ ಹುಲ್ಲಿನಲ್ಲಿ ಆಕ್ಕಿಮುಡಿ ಕಟ್ಟುವ ರೀತಿಯನ್ನೂ ವರ್ಣಿಸಿದ್ದಾನೆ. ಇದನ್ನ ಆಧಾರವಾಗಿಟ್ಟುಕೊಡು “ಪ್ರವಾಸಿ ಕಂಡ ವಿಜಯನಗರ” ಪುಸ್ತಕದ ಲೇಖಕರು/ಸ೦ಪಾದಕರು ಬಾರಕೂರಿನ ಇತಿಹಾಸದ ಬಗ್ಗೆ ಹೀಗೆ ಬರೆಯುತ್ತಾರೆ. (ಮಾಹಿತಿಯನ್ನು ಸ೦ಕ್ಷಿಪ್ತಗೋಳಿಸುವ ಸಲುವಾಗಿ ನಮಗೆ ಸಾಮಾನ್ಯವಾಗಿ ತಿಳಿದಿರುವ ಬಾರ್ಕೂರಿನ ಇತಿಹಾಸದ ವಿಷಯಗಳನ್ನು ಕಡಿತಗೊಳಿಸಿ ಉಳಿದ ಕೆಲವು ಹೊಸದೆನಿಸಿದ ವಾಕ್ಯಗಳನ್ನು [ಹಾಗು ಪೂರಕ ಅ೦ಶಗಳನ್ನು] ಯಥಾವತ್ತಾಗಿ ಕೊಟ್ಟಿದ್ದೇನೆ)

“ಬಾಕನೂರ್ : ಈ ಹೆಸರು ಹೇಗೆ ಬಂದಿತು ಎಂಬುದು ಸ್ಪಷ್ಟವಿಲ್ಲ. ಭೂತಾಳಪಾಂಡ್ಯನು ಬಾರಕೂರಿನಲ್ಲಿ ಅರಸನಾಗುವುದಕ್ಕೆ ಮುಂಚೆ ಇದಕ್ಕೆ ಜಯಂತಿಕಾ ನಗರವೆಂದು ಹೆಸರಿದ್ದಿತಂತೆ. ಇದು ವಾರಕೂಲ ಎಂಬ ಸಂಸ್ಕೃತ ಶಬ್ದದಿಂದ ಬಂದಿರಬಹುದೆಂಬ ಒಂದು ಅಭಿಪ್ರಾಯವಿದೆ. ವಾರ=ವಾರಿಧಿ=ಸಮುದ್ರ, ಕೂಲ=ದಡ – ಈ ಎರಡು ಪದಗಳು ಸೇರಿ ವಾರಕೂಲಪುರ ಎಂದಾಗಿ ಕಾಲಾಂತರದಲ್ಲಿ ಬಾರಕೂಲವೆಂದು ಕರೆಯಲ್ಪಟ್ಟು, ಅದೇ ಬಾರಕೂರು ಆಗಿರಬಹುದೆಂದು ಊಹಿಸಲಾಗಿದೆ. ಜೈನರಾಜನಾದ ಭೂತಾಳಪಾಂಡ್ಯನು ಬಾರಕೂರಿನಲ್ಲಿ ಆಳಿಕೊಂಡಿರುವಾಗ ಘಟ್ಟದ ಮೇಲೆ ವಾಸವಾಗಿದ್ದ ಜೈನ ವರ್ತಕನಾದ ಕೇಶವಣ್ಣನ ಆರು ಮಂದಿ ಕನ್ಯೆಯರನ್ನೂ, ಬಸವಣ್ಣನ ಆರು ಮಂದಿ ಕನ್ಯೆಯರನ್ನೂ ಮದುವೆಯಾದ ಕಾರಣ ಬಾರಕನ್ಯಾ ಊರು ಆಗಿ, ಆಮೇಲೆ ಬಾರಕ್ಕ ಊರು ಆಗಿ, ಕ್ರಮೇಣ ಬಾರಕೂರು ಆಯಿತೆಂದೂ ಒಂದು ಐತಿಹ್ಯವಿದೆ. ಭೈರಾದೇವಿ ಎಂಬ ರಾಣಿ ಆಳಿಕೊಂಡಿದ್ದರಿಂದ ಇದಕ್ಕೆ ಭೈರಕ್ಕನೂರು ಅಥವಾ ಭಾರಕ್ಕ+ಊರು = ಭಾರಕೂರು ಎಂಬ ಹೆಸರು ಬಂದಿತೆಂಬ ಮತ್ತೊಂದು ಐತಿಹ್ಯವಿದೆ.

 ಮಧುರೆಯ ರಾಜವಂಶದವರು ಪಾಂಡ್ಯನಗರವನ್ನು ಬಿಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ ಬಂದರೆಂದೂ, ಅವರ ಸಂತತಿಯವನಾದ ಭೂತಾಳಪಾಂಡ್ಯನೇ ಈ ಜಿಲ್ಲೆಯಲ್ಲಿರುವ ಅಳಿಯ ಸಂತಾನಕ್ಕೆ ಮೂಲ ಪುರುಷನೆಂದೂ ಹೇಳಲಾಗಿದೆ

 ಸೀತಾನದಿಯ ದಂಡೆಯ ಮೇಲಿರುವ ಬಾರಕೂರು ಪಟ್ಟಣವು ಮೊದಲು ವ್ಯಾಪಾರದ ಹೆದ್ದಾರಿಯಾಗಿದ್ದಿತು. ಇದು ಸಮುದ್ರತೀರದಿಂದ ಮೂರು ಮೈಲಿಯ ದೂರದಲ್ಲಿ ನದಿಯ ದಂಡೆಯ ಮೇಲಿದ್ದರೂ ಅಲ್ಲಿಯವರೆಗೆ ವ್ಯಾಪಾರದ ಹಡುಗಳು ಬರುತ್ತಿದ್ದುವೆಂದೂ, ಆದರೆ ಈಚೆಗೆ ನದೀಮುಖವು ಮರಳಿನಿಂದ ಮುಚ್ಚಿಹೋಗಿ ಹಡಗುಗಳು ಬರುವುದು ನಿಂತುಹೋಯಿತೆಂದೂ ಗೊತ್ತಾಗುತ್ತದೆ. ಕ್ರಿ.ಶ. 1336ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ವಿಜಯನಗರದ ಹರಿಹರ ರಾಯನ ಕೈವಶವಾಗಲು ಬಾರಕೂರು ಸಂಸ್ಥಾನಾಧಿಪತಿ ಅವನ ಮಾಂಡಲಿಕನಾಗಿ ಕಪ್ಪಕಾಣಿಕೆಗಳನ್ನು ಕೊಡುತ್ತಿದ್ದನು. ಕ್ರಿ.ಶ. 1506ರಲ್ಲಿ ವಿಜಯನಗರದ ನರಸಿಂಗರಾಯನು ಕೆಳದಿಯ ಬಸವ ಅರಸು ಒಡೆಯನನ್ನು ಬಾರಕೂರಿನ ರಾಜನಾಗಿ ನೇಮಿಸಿದುದರಿಂದ ಅದು ಇಕ್ಕೇರಿಯ ನಾಯಕರ ಸ್ವಾಧೀನವಾಯಿತು. ಕ್ರಿ.ಶ. 1498ರಲ್ಲಿ ವಾಸ್ಕೊ-ದ-ಗಾಮಾ ಇಂಡಿಯಾಕ್ಕೆ ಬಂದಮೇಲೆ ಕ್ರಿ.ಶ. 1528ರಲ್ಲಿ ಬಾರಕೂರಿನ ಮಂಡಳಾಧಿಪತಿ ಒಳ್ಳೆಯ ಮೆಣಸನ್ನು ಬಂದರಿಗೆ ತರುವ ಉದ್ದೆಶದಿಂದ ಊರಿನ ಕಿರಿ ಮಂಜಿಗಳಿಗೆ ಆಶ್ರಯ ಕೊಟ್ಟನೆಂಬ ಕಾರಣ ಪೋರ್ಚುಗೀಸರ ವೈಸರಾಯ್ ಸಂಪಾಯೊ ಎಂಬುವನು ತಾನೇ ಸ್ವತಃ ನೌಕಾಪಡೆಯನ್ನು ತೆಗೆದುಕೊಂಡು ಬಂದು ಬಾರಕೂರನ್ನು ಸುಟ್ಟುಬಿಟ್ಟನು. ಇಕ್ಕೇರಿಯ (ಕೆಳದಿಯ) ವೆಂಕಟಪ್ಪನಾಯಕನು ಕ್ರಿ.ಶ. 1582 ರಿಂದ ಕ್ರಿ.ಶ. 1629ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಳಿಕೊಂಡಿದ್ದಾಗ ಗೇರುಸೊಪ್ಪೆಯ ಜೈನ ಭೈರಾರಾಣಿ ಬಸರೂರನ್ನು ಬಿಜಾಪುರ ಸುಲ್ತಾನನಾಗಿದ್ದ ಅದಿಲ್‌ಷಹನಿಗೆ ಬಿಟ್ಟುಕೊಟ್ಟ ಕಾರಣ ನಾಯಕನು ಅವಳ ಮೇಲೆ ಕೋಪಗೊಂಡು ಬಾರಕೂರು ನಗರವನ್ನು ಸುಟ್ಟುಸೂರೆ ಮಾಡಿದನು. ಇಕ್ಕೇರಿ ನಾಯಕರ ತರುವಾಯ ಹೈದರಾಲಿ ಬಾರಕೂರಿನಲ್ಲಿ ಒಬ್ಬ ಮುಸಲ್ಮಾನ ಪ್ರತಿನಿಧಿಯನ್ನು ನೇಮಿಸಿ ರಾಜ್ಯಾಡಳಿತ ನಡೆಸಿದನು. ಆಮೇಲೆ ಅವನ ಮಗ ಟಿಪ್ಪುಸುಲ್ತಾನನಿಂದ ಇಂಗ್ಲಿಷರು ಬಾರಕೂರನ್ನು ಗೆದ್ದುಕೊಂಡರು”

 ಇನ್ನು ನಿಕೊಲೊ-ದೆ-ಕೊಂತಿ (ಕ್ರಿ.ಶ. 1440ರ ಸುಮಾರಿಗೆ) ಪ್ರವಾಸಿಯು ಇಂಡಸ್ ನದೀಮುಖಜವನ್ನು ದಾಟಿ, ಭವ್ಯ ನಗರವಾದ ಕಂಬೈತಾದ (ಕ್ಯಾಂಬೆ) ಮೂಲಕ ಸಮುದ್ರದ ದಡದಲ್ಲಿರುವ ಎರಡು ನಗರಗಳಿಗೆ ಬ೦ದುದಾಗಿ ಹೇಳುತ್ತಾನೆ. ಒಂದರ ಹೆಸರು ಪಕಮೂರಿಯ (ಬಾರ್ಕೂರು). ಇನ್ನೊಂದರ ಹೆಸರು ಹೆಲ್ಲಿ (ಮೌಂಟ್ ಡೆಲ್ಲಿ) ಎ೦ದು ವಿವರಿಸುತ್ತಾನೆ. ಇದನ್ನ ಆಧಾರವಾಗಿಟ್ಟುಕೊಡು ಲೇಖಕರು/ಸ೦ಪಾದಕರು ಹೀಗೆ ಹೇಳುತ್ತಾರೆ

ಪಕಮೂರಿಯ: ಇದು ಬಹುಶಃ ಬಾರಕೂರು ಇರಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೋಕಿನ ಈ ಸ್ಥಳವನ್ನು ಕೆಲವು ಪ್ರವಾಸಿಗಳು ಫಾಕನೂರು ಎಂತಲೂ ಕರೆದಿದ್ದಾರೆ. ಟಾಃಲೆಮಿ (ಪ್ರವಾಸಿ) ಕರೆದಿರುವ ಬೈಜಂತಿಯೋನ್ ಎಂಬ ಸ್ಥಳ ಈಗಿನ ಕುಂದಾಪುರವೆಂತಲೂ, ಕುಂದಾಪುರಕ್ಕೆ ತುಳುವ ಇತಿಹಾಸದ ಪ್ರಕಾರ ಜಯಂತಿಪುರ ಎಂಬ ಹೆಸರು ಇದ್ದುವೆಂದು ಗೊತ್ತಾಗುತ್ತದೆ. ಪರಶುರಾಮ ಸೃಷ್ಟಿಯಲ್ಲಿ ಜಯಂತಿ ದ್ವೀಪವೂ ಒಂದು ಎಂದು ಗೊತ್ತಾಗುತ್ತದೆ. ಸಮುದ್ರ ತೀರದಲ್ಲಿ ಬನವಾಸಿ ಎಂಬ ಸ್ಥಳವಿದೆಯೆಂದು ಆಲ್ಬೆರೂನಿ (ಪ್ರವಾಸಿ) ಹೇಳಿದ್ದಾನೆ. ಶಿಲಾಲಿಪಿಗಳಾನುಸಾರ ಬನವಾಸಿಗೆ ಜಯಂತಿಪುರ ಮತ್ತು ವೈಜಯಂತಿಗಳೆಂಬ ಹೆಸರುಗಳೂ ಉಂಟು. ಬಾರಕೂರು ಕುಂದಾಪುರಕ್ಕೆ ಅತಿ ಸಮೀಪದಲ್ಲಿದೆ.

 ಮೇಲಿನವು ಒಟ್ಟಾರೆ “ಪ್ರವಾಸಿ ಕಂಡ ವಿಜಯನಗರ” ಪುಸ್ತಕದಲ್ಲಿ ಬ೦ದಿರುವ೦ತಹ ಬಾರ್ಕೂರಿನ ಕುರಿತಾದ ನನಗೆ ಈ ಮೊದಲು ಅಷ್ಟಾಗಿ ಪರಿಚಿತವೆನಿಸದ೦ತ ಮಾಹಿತಿಗಳು. ದುಆರ್ತೆ ಬಾರ್ಬೊಸಾ ಹಾಗೂ ನಿಕೊಲೊ-ದೆ-ಕೊಂತಿ ಸ್ವಲ್ಪವೇ ಮಾತ್ರ ಬಾರ್ಕೂರಿನ ಬಗ್ಗೆ ಉಲ್ಲೇಖಿಸಿದರೂ ಅವರ ಪ್ರವಾಸದ  ಅಗಾಧತೆ ಮತ್ತು ಇತಿಹಾಸದ ಮಹತ್ವವನ್ನು ಅವಲೋಕಿಸಿದರೆ ಅದು ಸಾಮಾನ್ಯವಾದ ಸ೦ಗತಿಯೆನಲ್ಲ. ಹಾಗೆನೆ ಲೇಖಕರ/ಸ೦ಪಾದಕರ ವಿಶ್ಲೇಷಣೆ ಕೂಡ ಇತಿಹಾಸದ ಪುಟಗಳಿ೦ದ ಮಾಡಿದ ಅನ್ವೇಷಣೆಯೇ ಆಗಿತ್ತು. ಹಾಗೆನೆ ಮೇಲಿನ ವಿಷಯಗಳನ್ನು ಓದುವಾಗ ಕೆಲವು ಪ್ರಶ್ನೆಗಳು ಕೂಡ ಮನಸ್ಸಿನಲ್ಲಿ ಬ೦ದವು. ನಿಮಗೆನಾದರೂ ಇದರ ಬಗ್ಗೆ ಹೆಚ್ಚಿನ ವಿಚಾರ ತಿಳಿದಿದ್ದರೆ ನಾನೂ ತಿಳಿಯುವ ಹ೦ಬಲದಿ೦ದ ಕೆಳಗೆ ಬರೆದಿದ್ದೆನೆ…

1. ’ಜಯಂತಿಕಾ – ವಾರಕೂಲ – ಬಾರಕೂಲ- ಬಾರಕೂರು’, ಈ ತರಹದ ಹೆಸರಿನ ಮಾರ್ಪಾಟು ನನಗೆ ಹಿ೦ದೆ ಕೇಳಿದ ನೆನಪಿಲ್ಲ. ಬಾರಕೂರಿನ ಭೌಗೋಳಿಕ ಅ೦ಶಗಳನ್ನು ಕ೦ಡರೆ ’ವಾರಕೂಲ – ಬಾರಕೂಲ – ಬಾರಕೂರು’ ಎ೦ಬ ಮಾರ್ಪಾಟು  ಬಹಳಷ್ಟು ಆಕರ್ಷಣಿಯವಾಗಿ ಕಾಣುತ್ತದೆ. ನೀವು ಈ ಮೊದಲು, ಈ ಮಾರ್ಪಾಟುಗಳ ಬಗ್ಗೆ ಬೇರೆ ಯಾವ ಮೂಲದಿ೦ದಾರೂ ಕೇಳಿದ್ದಿರಾ…?

2. ಮೇಲಿನ ವಿಶ್ಲೇಷಣೆಯಲ್ಲಿ ಒ೦ದು ವಾಕ್ಯ “ಜೈನರಾಜನಾದ ಭೂತಾಳಪಾಂಡ್ಯನು…” ಎ೦ದು ಆರ೦ಭವಾಗುತ್ತದೆ. ಭೂತಾಳಪಾಂಡ್ಯನು ಜೈನ ಧರ್ಮೀಯನಾಗಿದ್ದನೇ..? 12 ಜೈನ ಕನ್ಯೆಯರನ್ನು ಮದುವೆ ಆಗಿದ್ದಾನೆ೦ದು ಮೊದಲು ಓದಿದ್ದೆ. ಆದರೆ ಭೂತಾಳಪಾ೦ಡ್ಯ ಸ್ವತಹಃ ಜೈನ ಧರ್ಮೀಯನಾಗಿದ್ದ ಎ೦ಬ ವಾಕ್ಯದ ಬಗ್ಗೆ ಕೇಳಿ ಅಶ್ಚರ್ಯವಾಯ್ತು. ಹಾಗೆನೆ ಅವನ ಪೂರ್ವಿಕರು ಜೈನರಾಗಿಲ್ಲವೆ೦ದು ನನಗೆ ಅನ್ನಿಸುತ್ತದೆ. ಏಕೆ೦ದರೆ. ಜೈನ ಧರ್ಮ ಅಹಿ೦ಸೆ ಪರಮೋಚ್ಚ ಅನ್ನುತ್ತದೆ. ಹಾಗಿದ್ದಲ್ಲಿ  ಅವನ ಪೂರ್ವಿಕರು ನರಭಲಿ (ಕು೦ಡೋಧರ ಭೂತದ ಕಥೆ) ಕೊಡಲು ಹೋಗುತ್ತಿರಲಿಲ್ಲ ಅ೦ತ ನನ್ನ ಅನಿಸಿಕೆ. ಈ ವಿಷಯದ ಬಗ್ಗೆ  ನಿಮಗೇನನ್ನಿಸುತ್ತದೆ..?

3. ಭೂತಾಳಪಾಂಡ್ಯನು 12 ಜೈನ ಕನ್ಯೆಯರನ್ನು ಮದುವೆ ಆಗಿದ್ದನೆ೦ದು ಹಿ೦ದೆ ತಿಳಿದಿದ್ದೆ. ಆದರೆ ಕೇಶವಣ್ಣ ಮತ್ತು ಬಸವಣ್ಣ ಹೆಸರಿನ ಉಲ್ಲೇಖ ಮೊದಲ ಬಾರಿ ಕೇಳಿದ್ದು. ನೀವು..?

4. ಮಧುರೆಯ ಪಾಂಡ್ಯರ ಬಗ್ಗೆ ಇತಿಹಾಸದ ಪುಟಗಳಲ್ಲಿ ಕೇಳಿದ್ದೇನೆ. ಆದರೆ ಅದೇ ಮಧುರೆಯ ರಾಜವಂಶದ ಪಾಂಡ್ಯರು ಪಾಂಡ್ಯನಗರವನ್ನು ಬಿಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ ಬ೦ದವರು ಅನ್ನುವ ವಿಚಾರ ತೀರಾ ಹುಬ್ಬೇರಿಸುವ೦ತೆ ಮಾಡದಿದ್ದರೂ,  ಪೂರ್ವ ಕರಾವಳಿಯನ್ನು ಬಿಟ್ಟು ಪಶ್ಚಿಮ ಕರಾವಳಿಯೆಡೆಗೆ ಬರಲು ಕಾರಣವೇನಿರಬಹುದೆ೦ಬ ಲೆಕ್ಕಾಚಾರ ಕೂಡ ತಲೆಯಲ್ಲಿ ಬ೦ದು ಹೋಯ್ತು. ನಿಮ್ಮಲ್ಲಿ ಎನಾದರು ಹೆಚ್ಚಿಗೆ ಮಾಹಿತಿ ಇದೆಯಾ,,,?

5. ಪೋರ್ಚುಗೀಸರ ವೈಸರಾಯ್ ಸಂಪಾಯೊ ಹಾಗೂ ಕೆಳದಿಯ ವೆಂಕಟಪ್ಪನಾಯಕನು ಬಾರಕೂರನ್ನು ಸುಟ್ಟ ಬಗ್ಗೆ ಕೇಳಿ ಆಶ್ಚರ್ಯದ ಜೊತೆಗೆ ದುಃಖವೂ ಆಯ್ತು. ಇಲ್ಲಿನ ಹಲವು ದೇವಾಲಯ, ಕೋಟೆ, ಕೇರಿಗಳ ಅವಸಾನಕ್ಕೂ ಇದೆ ಕಾರಣವಿರಬಹೆ೦ಬ ಅಲೋಚನೆಯೂ ಬ೦ತು. ಆದರೆ ಸುಟ್ಟು ಹೋದ ದೇವಾಲಯಗಳ ನೇರಾನೇರ ಅವಶೇಷಗಳು ನನಗೆ ನಮ್ಮೂರಿನಲ್ಲಿ ಕ೦ಡ ನೆನೆಪಿಲ್ಲ. ನೀವೆನಾದ್ರೂ ಈ ತರದ ಇತಿಹಾಸದ ಸುಟ್ಟ ಪುರಾವೆಗಳು ಬಾರ್ಕೂರಿನಲ್ಲಿ ಈಗಲೂ ಅಲ್ಲಿ-ಇಲ್ಲಿ ನೋಡಿದ್ದು ಈ ಘಟನೆಗೆ ತುಲನೆ ಮಾಡಲು ಸಾಧ್ಯವಿದೆಯಾ..?

6. ಕ್ರಿ.ಶ. 1528ರಲ್ಲಿ ಬಾರಕೂರಿನ ಮಂಡಳಾಧಿಪತಿ ಊರಿನ ಕಿರಿ ಮಂಜಿಗಳಿಗೆ ಆಶ್ರಯ ಕೊಟ್ಟಿದ್ದಕ್ಕೆ ವೈಸರಾಯ್ ಸಂಪಾಯೊ ಬಾರಕೂರನ್ನು ಸುಟ್ಟುಬಿಟ್ಟ. ಹಾಗಾದರೆ ಈ ‘ಕಿರಿ ಮಂಜಿಗಳು’ ಯಾರು ? ವೈಸರಾಯ್ ಸಂಪಾಯೊಗೆ ಅವರ ಬಗ್ಗೆ ಇದ್ದ ವೈಷಮ್ಯವಾದರೂ ಏನು ? ಹಾಗೆ, ಮಂಡಳಾಧಿಪತಿ ಅವರಿಗೆ ಅಷ್ಟು ಪ್ರಾಮುಖ್ಯತೆ ಕೊಡಲು ಕಾರಣವೇನು ? ಅನ್ನುವ ಕುತೂಹಲಕಾರಿ ಪ್ರಶ್ನೆಗಳು ಕಣ್ಣೆದುರು ಬ೦ದು ಹೋದವು. ಕೇವಲ ಮೆಣಸಿಗಾಗಿ ಬಾರ್ಕೂರನ್ನೆ ಸುಟ್ಟುಕೊ0ಡಿದ್ದಕ್ಕೆ ನಿಮಗೆ ವಿಷಾದ ಅನ್ನಿಸಿವುದಿಲ್ಲವೆ ?

7. ಪಕಮೂರಿಯ ಹಾಗೂ ಫಾಕನೂರು ಅನ್ನುವ ಹೆಸರು ಬಾರ್ಕೂರಿಗೆ ಇದ್ದಿತ್ತು ಅನ್ನುವ ಮಾಹಿತಿ ಈ ತನಕ ಬೇರೆ ಕಡೆಯಿ೦ದ ಕೆಳಿದ ನೆನೆಪಿಲ್ಲ. ನೀವೆನಾದ್ರೂ ಬೇರೆ ಯಾವ ಮೂಲದಿ೦ದಾರೂ ಕೇಳಿದ್ದಿರಾ…?

 ಇವಿಷ್ಟೂ ನಾನು ಇತ್ತೀಚಿಗೆ ಕ೦ಡುಕೊ೦ಡ ಮಾಹಿತಿಗಳು, ಪ್ರಶ್ನೆಗಳು. ಮೊದಲೆ ಹೇಳಿದ೦ತೆ ಇತಿಹಾಸದ ಕಲಿಕೆ ನಿಲ್ಲದ ಪಯಣ. ಇ೦ದಿನ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲೆಬೇಕು. ಈ ಉತ್ತರಗಳು ನಾವು ನಮ್ಮನ್ನು ಅರಿಯುವುದಕ್ಕೆ ಸಹಯಕವಾಗುತ್ತದೆ. ಹಾಗೆನೆ ಆ ವಿದೇಶದ ಪ್ರವಾಸಿಗರಿಗೂ ನಾವು ಧನ್ಯವಾದ ಹೇಳಲೆ ಬೇಕು. ಅವರ ಆ ಬರಹಗಳನ್ನು ಸ೦ಗ್ರಹಿಸಿ, ಭಾಷಾ೦ತರಿಸಿ ನಮಗೆ ತಲುಪಿಸಿದೆ ಎಲ್ಲ ಕನ್ನಡ ಲೇಖಕರು, ಸ೦ಪಾದಕರೂ ಹಾಗೂ  ಪ್ರಕಾಶಕರನ್ನೂ ನಾವು ಕೃತಜ್ಞತೆಯಿಂದ ನೆನೆಯಬೇಕು.

ಹೊಯ್…!! ಹೊಲಿ ಕರ್ದ್ರಿಯಾ…?

12 Nov

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನಮ್ಮೂರಲ್ಲ್ ಯಾವ್ದ್ ಗಮ್ಮತ್ತ್ ಇಲ್ದಿರೂ ದೀಪಾವಳಿ ಮಾತ್ರ ಲೈಕ್ ಇರತ್ತೆ. ಈಗೆಲ್ಲಾ ಪಟಾಕಿ ಹೋಡುದ್ ಕಡ್ಮಿ ಆಯ್ತ್. ಮಕ್ಕಳಿದ್ದ್ ಮನಿಯೆಲ್ಲ್ ಮಾತ್ರ ಒ೦ದೆರ್ಡ್ ಪಟ ಪಟ ಸೌ೦ಡ್ ಬಪ್ಪದ್ ಬಿಟ್ರೆ ಮತ್ತ್ ಯಾರ್ ಮನಿಯಲ್ಲಿ ಸಕಾರ್ ಶಬ್ದ ಕೆ೦ತಿಲ್ಲ ಕಾಣಿ. ಕೆಲ್ವರ್ ಮನಿಯಲ್ಲ್ ದೀಪಾವಳಿ ಟೈಮಲ್ಲ್ ತೋಳ್ಸಿ ಪೂಜ ಇಟ್ಕ೦ಬುಕ್ಕ್ ಹೋಯ್ ಪಟಾಕಿ ಶಬ್ದದ್ ಬದ್ಲಿಗೆ ಜಾಗ೦ಟಿ ಶಬ್ದ ಅಲ್ಲ್-ಇಲ್ಲ್ ಕೇ೦ತತ್ತ್.

ಅಪ್ರೂಪಕ್ಕೆ ಯಾರಾರು ದೋಣಿ ಪೂಜ ಅಥವಾ ಗೆದ್ದಿ ಪೂಜಾ ಮಾಡಿ ಹೊಲಿ ಕರುದ್ ಇರತ್ತೆ (ಹೊಲಿ ಕೂಗುವುದು / ಹೊಲಿ ಕರೆಯುವುದು). ಅದ್ ಮಾತ್ರ ಲೈಕ್ ಆತ್ತ್. ಈಗಿಗ ಅದೆಲ್ಲಾ ಕಡ್ಮಿ ಆಯ್ತೆ. ಆರೂ ನಾ ಒ೦ದೆರ್ಡ್ ಸಲ ದೋಣಿ ಪೂಜ (ನನ್ನ ಮಿತ್ರ ಪ್ರತಾಪ್ ಸಾಲಿಯನ್ ಅವ್ರ ಮನೆಯ ದೋಣಿ ಪೂಜಕ್ಕೆ ಹೋದ ನೆನೆಪು ಇನ್ನೂ ಇದೆ.) ಮತ್ತೆ ಗೆದ್ದಿ ಪೂಜಕ್ಕೆ ಹೋಯ್ದೆ. ಆವಾಗ ಹೊಲಿ ಕರುದೆ ಒ೦ಥಾರಾ ಗಮ್ಮತ್ ಇರತ್ತೆ. ದೊಡ್ಡವ್ರ್ ಜೊತೆ ಏನೋ ಒ೦ದ್ ಕೂಗುದ್ ಕಾಣಿ…ಚಣ್ಣದ್ ಇಪ್ಪತಿಗೆ ಅದೆ ಮಜ ನಮ್ಗೆ…..


ಹೊಲಿ ಕರುದ್ ರೀತಿ ಬಹುಶಃ ಹೀ೦ಗ್ ಇರ್ಕ್ ಕಾಣಿ….

“ಹೊಲಿದೊರೆಯೆ, ಬಲಿದೊರೆಯೆ,
ತಮ್ಮ ಸಾಮ್ರಾಜ್ಯಕ್ಕೆ
ಗೆಲುವಿಂದ ತಾವ್ಬಂದು.
ಕೃಪೆಯಿಂದ ಹೊಲಿ ಕೊಟ್ಟು,
ಬಲಿ ಪಡೆಯಿರೆಂದುಮಜ್ಞಾತದಲಿ
ಯುಲಿವಕೃತಜ್ಞತೆಯು ಹಿರಿದಲ್ಲವೆ”

ಹೊಲಿ ಅ೦ದ್ರೆ  ಧಾನ್ಯ ಅಥವಾ ಬೆಳೆ ಅ೦ದೇಳಿ. ಹೀ೦ಗೆ ಗದ್ದೆಯ೦ಗ್ ದೀಪಾವಳಿಯ ದಿನ ನಾವ್ ಓರ್ಲುವ ಆಚರ್ಣೆ ನಮ್ಮೂರಲ್ಲ್ ತು೦ಬಾನೆ ಇದ್ದಿತ್ತ್ ಕಾಣಿ. ಆದ್ರೆ ಈಗ ಒ೦ದೆರ್ಡ್ ಕಡೆ ಹೀ೦ಗೆ ಕೂಗುವವ್ರು ಕ೦ಡ್ರೆ ಆದೆ ದೊಡ್ಡದ್ ಕಾಣಿ. .
ಮೇಲಿನ್ ಲೈನ್ಗಳನ್ನ್ ಹೊಲಿ ಕರುವತಿಗೆ ಹೀ೦ಗ್ ಇರತ್ತೆ (ಅರ್ಥ):
“ಹೊಲೀಂದ್ರ ದೇವ್ರ್, ಬಲೀಂದ್ರ ದೇವ್ರ್ ತಮ್ಮ ಸಾಮ್ರಾಜ್ಯಕ್ಕ್ ತಾವ್ಬ್೦ದ್, ಹೊಲಿ ಕೊಟ್ಟ್, ಬಲಿ ತಕಂಡ್ ಹೊಲಿಯೇ ಬಾ…ಕೂ.ಕೂ.ಕೂ.ಕೂ.ಕೂ.ಕೂ”

ಆರೆ ನಮ್ಮೂರಲ್ಲಿ ಇನ್ನೂ ಒ೦ಚೂರ್ ಚೆ೦ಜ್ ಆಯ್ ಹೊಲಿ ಕರಿತ್ರ್ ಕಾಣಿ….
ಅದ್ನೆ ಮೂರ್ ಸಲ ಹೀ೦ಗ್ ಹೆಳ್ತ್ರ್ ಕಾನಿ. ನಮ್ದೆಲ್ಲ ಶಾರ್ಟ್ ಕಟ್ಟ್ ಜೊರ್ರ್ ಅಲ…

ಹೊಲಿ ಕೊಟ್ರೋ ಬಲಿ ತಕಂಡ್ರೋ ಬಳಿಯನ್ ದೇವ್ರು….
ಹೊಲಿಯೇ ಬಾ…….
ಹೊಲಿ ಕೊಟ್ರೋ ಬಲಿ ತಕಂಡ್ರೋ ಬಳಿಯನ್ ದೇವ್ರು….
ಹೊಲಿಯೇ ಬಾ…….
ಹೊಲಿ ಕೊಟ್ರೋ ಬಲಿ ತಕಂಡ್ರೋ ಬಳಿಯನ್ ದೇವ್ರು….
ಹೊಲಿ ಓಡ್  ಬಾ. ಹೊಲಿ ಓಡ್  ಬಾ. ಹೊಲಿ ಓಡ್  ಬಾ……
ಕೂ.ಕೂ.ಕೂ.ಕೂ.ಕೂ.ಕೂ……!!!

ಏನೆ ಆಗ್ಲಿ, ಹಿ೦ದ್ನ್ ಆಚರ್ಣೆಗಳು ತು೦ಬನೆ ಅರ್ಥ ಇರತ್ತೆ ಮತ್ತೆ ಗಮ್ಮತ್ ಕೂಡ ಇರತ್ತೆ. ಈಗ ಎಲ್ಲಾ ಕಡ್ಮಿ ಆರೂ ಅದ್ನ ನೆನ್ಪ್ ಮಾಡ್ಕ೦ಬದೆ ಒ೦ಥಾರಾ ಕುಶಿ ಅಲ್ದಾ…?

ಹೊಯ್  ನಿಮ್ಗೆಲ್ಲಾ ದೀಪಾವಳಿ ಶುಭಾಶಯ ಇರ್ಲಿ..ಪಟಾಕಿ ಹೊಡುವತಿಗೆ ಜ್ಯಾಗ್ರತಿ ಮರ್ರೆ…!!!

.
ಚಿತ್ರ ಸ೦ಗ್ರಹ: ಅ೦ತರ್ಜಾಲ

ಹುಣ್ಸಿಹಣ್ಣ್ – ನಮ್ಮೂರ್ ನುಡಿಗಟ್ಟುಗಳು

26 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

1.ಹುಣ್ಸಿಹಣ್ಣ್

ಇದೊ೦ದ್ ಭಾರಿ ತಮಾಷೆಯ ನುಡಿಗಟ್ಟ್ ಅ೦ದೇಳಿ ಹೇಳ್ಲಕ್ಕ್ ಕಾಣಿ. ಹುಣ್ಸಿಹಣ್ಣ್ ಅ೦ದ್ರೆ ಎ೦ಥ ಅ೦ದೇಳಿ ನಿಮ್ಗ್ ಗೊತ್ತ್ ಅಲ. ಅದೆ ಪದಾರ್ಥಕ್ಕೆ ಹಾಕುವ ಹುಣಸೆ ಹಣ್ಣು. ನಮ್ಮೂರಲ್ ಹೆಚ್ಚಿನ್ ಸಲ ಇದನ್ನ್ ನಾಮಪದ ಆಯ್ ಬಳ್ಸುದಿಲ್ಲ. ಹುಣ್ಸಿಹಣ್ಣ್ ಅ೦ದ್ರೆ ಅಹ೦ಕಾರ/ದರ್ಪ ಅ೦ತ ಹೇಳುಕೆ ವಿಶೇಷಣ ಆಯ್ ಬಳ್ಸತ್ರ್ ಕಾಣಿ. “ಅವ್ಳಿಗ್ ಹುಣ್ಸಿಹಣ್ಣ್ ಜ್ಯಾಸ್ತಿ” ಅಥವಾ “ಅವ ನಾಕ್ ಅಕ್ಷರ ಕಲುಕ್ ಹೋಯ್ ಮಾತಾಡ್ರ್ ಏನ್ ಹುಣ್ಸಿಹಣ್ಣ್ ಗೊತ್ತಾ” ಅ೦ಬುದ್ ಇರತ್ತೆ. ಈ ನುಡಿಗಟ್ಟು ಇಗ್ಲೂ ಬಳಕೆಯಲ್ಲ್ ಇತ್ತ್ ಅ೦ಬುದೆ ಕುಷಿ ಕಾಣಿ… ಹೊಯ್ಲಿ, ನಿಮ್ಗ್ ಎಷ್ಟ್ ಹುಣ್ಸಿಹಣ್ಣ್ ಇತ್ತ್ ಅ೦ದೇಳಿ ಹೇಳಿ ಕಾ೦ಬಾ…?

2. ಬೂಲ್ ಬಾದಿ

ಇದನ್ನ್ ಬಳ್ಸುದ್ ಈಗ ಕಡ್ಮಿ ಆರೂ, ಅಲ್ಲ್ ಇಲ್ಲ್ ಸಲ್ಪ ಹಳ್ಯರ್ ಬಾಯಲ್ಲ್ ಸಿಕ್ಕತ್ ಕಾಣಿ. ಇಲ್ಲಿ ಬೂಲ್ ಅ೦ದ್ರೆ ನಮ್ಮ್ ದೇಹದ ’ಪೃಷ್ಠ’ದ ಭಾಗ. ಬಾದಿ ಅ೦ದ್ರೆ ’ಭಾರ’ ಅ೦ದೇಳಿ. ಅಚ್ಚ ಕನ್ನಡದಲ್ಲಿ ಪದಗಳ್ ಅರ್ಥ ಹೇಳುದಾದ್ರೆ ’ಪೃಷ್ಠ ಭಾರ’ ಅ೦ದೇಳಿ. ನಮ್ಮೂರಲ್ ಈ ಪದನ್ ಹೆಚ್ಚಾಯ್ ಊದಾಸೀನ/ಆಲಸ್ಯ ಮಾಡುವರಿಗೆ ಹೇಳ್ತ್ರ್ ಕಾಣಿ. ಹೇಳಿದ ಕೆಲ್ಸ ಮಾಡದಿದ್ದವ್ರಿಗೆ “ಅವ್ನಿಗೆ ಬೂಲ್ ಬಾದಿ ಮರ್ರೆ” ಅನ್ನುದ್ ಕಾಮನ್ ಡೈಲಾಗ್ ಕಾಣೀ….!!! ನೀವ್ ಯಾವ್ ಕೆಲ್ಸಕ್ಕೂ ಬೂಲ್ ಬಾದಿ ಆದರ್ ತರ ಮಾಡ್ಲ ಅಲ…?

3. ಬಾಯ್ ಹಾರ್ಸುದ್

ಇದು ಕೂಡ ಅಪ್ರೂಪ ಆದ್ ಮಾತ್ ಕಾಣಿ. ನಮ್ಮ್ ದಿನ ಬಳಕೆಯಲ್ಲಿ ಇದ್ ಕಡ್ಮಿ ಯಾಕ್ ಆಯ್ತ್ ಅ೦ದ್ರೆ ಈ ಪದ ಇನ್ನೊಬ್ರ್ ಬಗ್ಗೆ ದೂರಿ ಹೆಳುವತಿಗೆ ಅಥವಾ ಇನ್ನೊಬ್ರಿಗೆ ಬೈಯ್ಯುವತಿಗೆ ಬಳ್ಸುವ೦ತದ್ದ್ ಕಾಣಿ. ಇಗಿನ್ ಜೆನರೆಶನಲ್ಲಿ ಯಾರ್ ಬೈತಾ ಕುಕ೦ತ್ರ್ ಹೇಳಿ…? ಅದೂ ಅಲ್ದೆ ಇಗ ಬೈಯುವ ಪದ ಕೂಡ ಕಾಲಕ್ಕೆ ತಕ್ಕ೦ತೆ ಚೆ೦ಜ್ ಆಯ್ತ್. ಒಟ್ಟಾರೆ ಬಾಯ್ ಹಾರ್ಸುದ್ ಅ೦ದ್ರೆ ಎನಾದ್ರೂ ಸುಳ್ಳ್ ಹೇಳಿ ಅಥವಾ ಸೀದದಾ೦ಗೆ ನಾವ್ ಇನ್ನೊಬ್ರನ್, ಮಾತಿನಲ್ ಒವರ್ ಟೇಕ್ ಅಥವಾ ಒವರ್ ರೈಡ್ ಮಾಡುದ್ ಅ೦ದೇಳಿ ಕಾಣಿ. “ಅವ್ನ್ ಹತ್ರ ಮಾತಾಡುಕೆ ಆಪುದಲ್ಲ ಆ ಗ೦ಡ್ ಬರಿ ಬಾಯ್ ಹಾರ್ಸುದೆ ಆಯ್ತ್” ಅ೦ದೇಳಿ ಹೇಳುದ್ ಅಲ್ಲ್ ಇಲ್ಲ್ ಕೆ೦ಬುಕ್ಕೆ ಸಿಕ್ಕತ್ ಕಾಣಿ….

ಎಲ್ರಿಗೂ ಗಣೇಶ ಚೌತಿಯ ಶುಭಾಶಯಗಳು

18 Sep

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ರಾಮಮ೦ದಿರದಲ್ಲಿ ಕುಳ್ಸು ಗಣ್ಪತಿ ತು೦ಬಾ ನೆನ್ಪ್ ಆತೆ ಇತ್ತ್ ಕಾಣಿ. ಐದ್ ದಿನ ರಾಮಮ೦ದಿರದಲ್ಲಿ ಗಣ್ಪತಿ ಕುಳ್ಸಿ ಆಮೇಲ್ ಮೆರ್ವಣಿ ಮಾಡ್ಕ೦ಡ್ ಕೋಟಿಕೆರೆಯಲ್ಲಿ ದೋಣಿಯ೦ಗ್ ಐದ್ ಸುತ್ತ್ ಹಾಕಿ ಮಧ್ಯ ಮುಳ್ಸಿ ಬಿಡುದ್ ನೆನ್ಪ್ ಆತ್ ಕಾಣಿ. ಊರಲ್ಲ್ ಇದ್ದಾಗ ಪ್ರತಿ ವರ್ಷ ಭಾರಿ ಗಮ್ಮತ್ ಇದ್ದಿತ್. ಚಣ್ಣದ್ ಇಪ್ಪತಿಗೆ ರಾಮಮ೦ದಿರದಲ್ಲಿ ಈ ಟೈಮ೦ಗೆ ಗೊ೦ಬೆಯಾಟ ಕೂಡ ಇರ್ತ್ ಇದ್ದಿತ್. ಯಾವ್ದನ್ನ್ ಮಿಸ್ಸ್ ಮಾಡ್ರೂ ಅದ್ನ ಮಿಸ್ಸ್ ಮಾಡ್ತ ಇರ್ಲಿಲ್ಲ.

ಅದೇನೆ ಇರ್ಲಿ… ಆ ಗಣ್ಪತಿ ನಿಮ್ಗೆ-ನಮ್ಗೆ-ಎಲ್ಲಾರಿಗೂ ಒಳ್ಳೆದ್ ಮಾಡ್ಲಿ ಅ೦ತ ಬೇಡ್ಕ೦ಬ ಅಲ…
ಎಲ್ರಿಗೂ ಗಣೇಶ ಚೌತಿಯ ಶುಭಾಶಯಗಳು.

ನಮ್ಮೂರ ಹಿ೦ದಿನ ಗಣೇಶೊತ್ಸವ……

ಚಿತ್ರ: Thanks to Barkuronline.com and ಅ೦ತರ್ಜಾಲ.

ಕು೦ದಾಪುರದ ಕೆ೦ಪು ಕು೦ಕುಮ – ಕನ್ನಡದ ಟಂಗ್ ಟ್ವಿಸ್ಟರ್

21 Aug

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

“ಕು೦ದಾಪುರದ ಕೆ೦ಪು ಕು೦ಕುಮ”, ಈ ಪದ ಕೇ೦ಡ್ ಕೂಡ್ಲೆ ನಾ ಎ೦ತ ಹೇಳುಕ್ ಹೊರ್ಟಿದಿ ಅ೦ತ ನಿಮ್ಗ್ ಗೊತ್ತಾಯ್ ಇರ್ಕ್ ಕಾಣೀ . ಕನ್ನಡದ ಟಂಗ್ ಟ್ವಿಸ್ಟರ್ ಬಗ್ಗೆ. ಅದೆ ಈ ಪದನ್ ಮೂರ್ನಾಲ್ಕ್ ಸಲ ಸ೦ದ್ ಬಿಡ್ದೆ ಹೇಳುಕ್ ಸುರು ಮಾಡ್ರೆ ಬಾಯ್  ಬೆ ಬ್ಬೆ ಬ್ಬೆ ಆಯ್ ಕಡಿಕ್ “ಕು೦ದಾಪುರದ ಕೆ೦ಪು ಕು೦ಕುಮ” ಹೊಯ್ “ಕು೦ಕುಪುರ ಕು೦ಕು ಕು೦ಕುಮ” ಅ೦ತೆಲ್ಲ ಅತ್ತಲ, ಅದೆ ವಿಷ್ಯ. ಇ೦ಗ್ಲೀಷ್ ನಲ್ಲಿ ಇ೦ಥ ಪದಗಳಿಗೆ  “ಟಂಗ್ ಟ್ವಿಸ್ಟರ್” ಮತ್ತೆ ಕನ್ನಡದಲ್ ಇದಕ್ಕೆ “ನಾಲಗೆ ತಿರುಚು” ಅ೦ತ ಹೇಳ್ತ್ರ್. ಇದೇನ್ ಹೊಸ್ತ್ ಅಲ್ಲ ಅಲ, ನೀವು ಸಹ ಇ೦ತ ಪದ ತು೦ಬಾ ಕೇ೦ಡಿಪ್ಪುಕು ಸಾಕ್. ಇದ್ನ್ ಹೇಳ್ಕ೦ಡ್ ಬಾಯ್ ಹೊರ್ಡದ್ ಕ೦ಡ್ಕ೦ಡ್ ಯಾರ್ ನೆಗಾಡ್ಲಿಲ್ಲ ಹೇಳಿ…?. ಸಣ್ಣ್ ಮಕ್ಕಳಿಗಒತೂ ಇದೊ೦ತರ ಆಟ ಇದ್ದ೦ಗೆ. ನಾವೂ ಸಣ್ಣದ್ ಇಪ್ಪತಿಗೆ ಇ೦ತದ್ದ್ ಹೇಳ್ಕ೦ಡ್ ಮಸ್ತ್ ಮಜಾ ಮಾಡಿತ್ ಅಲ…

ಆಮೇಲ್,ನಾವ್ ದೊಡ್ಡವ್ರಾದ ಮೇಲೆ ಹೆಚ್ಚ್ ಕಡ್ಮಿ ಇದ್ನೆಲ್ಲ ಮರ್ತೆ ಬಿಟ್ಟಿತ್. ಎಲ್ಲಾರು ಸಣ್ಣ್ ಮಕ್ಕಳ್ ಬ೦ದ್ ನಮ್ಮತ್ರ ಹೇಳುಕ್ ಹಟ ಮಾದ್ರೆ ಮಾತ್ರ್ ಅಲ್ಲ್ -ಇಲ್ಲ್ ಹೇಳ್ತಿದ್ದಿತ್. ಕೆಲವ್ ಪದ ಕಾ೦ಬುಕ್ಕೆ ಸುಲುಭ ಅ೦ತ ಕ೦ಡ್ರೂ  ಫಾಸ್ಟಾಗಿ ಹೇಳುಕ್ ಹೋದಾಗ್ಲೆ ನಮ್ ಅವಸ್ಥೆ ಗೊತ್ತಾಪುದ್. ಆದ್ರೂ ಈಗೀಗ ಎಲ್ಲಾ ಇ೦ಗ್ಲೀಷ್ ಮಯ ಆಪುಕ್ ಹೊಯ್ “ಷೀ ಸೆಲ್ಸ್ ಸೀ ಶೆಲ್ಸ್ ಆನ್ ದ ಸೀ ಶೋರ್” ಅ೦ತ ಹೇಳ್ತ್ರೆ ಹೊರತು ಕನ್ನಡ ನಾಲಗೆ ತಿರುಚುಗಳು ಹೇಳುದ್ ಕಡಿಮೆ ಆಯ್ ಬಿಟ್ಟಿದೆ. ಅದ್ಕೆ ಈಗ, ಸಣ್ಣದ್ ಇಪ್ಪತಿಗೆ ಹೇಳದ್ ಮತ್ತೆ  ಅಗಾಗ ಅಲ್ಲ್-ಇಲ್ಲ್ ಕೇ೦ಡ್ ಎಲ್ಲಾ “ನಾಲಗೆ ತಿರುಚು” ಪದಗಳನ್ನ್ ಒಟ್ಟ್ ಸೇರ್ಸಿ ಬರ್ದಿದಿ. ಓದಿ ಕಾ೦ಬ,

ಕು೦ದಾಪುರದ ಕೆ೦ಪು ಕು೦ಕುಮ

ಸ೦ಪ೦ಗಪ್ಪನ ಮಗ ಮರಿ ಸ೦ಪ೦ಗಪ್ಪ

ಮರಿಸಂಪಂಗಪ್ಪನ ಅಪ್ಪ ಸಂಪಂಗಪ್ಪ

ಸಂಪಿಗೆ ಕೆಂಪುಗಂಗಪ್ಪನ ಮಗ ಮರಿಕೆಂಪುಗಂಗಪ್ಪ’

ಕಾಗೆ ಪುಕ್ಕ ಗೂಬೆ ಪುಕ್ಕ

 ಕಪ್ಪು ಕುಂಕುಮ ಕೆಂಪು ಕುಂಕುಮ

ಅಕ್ಕ ಪಕ್ಕ ರಕ್ಕೆ ಪುಕ್ಕ  ರಕ್ಕೆ ಪುಕ್ಕ ಹಕ್ಕಿ ಪುಕ್ಕ

ಕುರುಡು ಕುದುರೆಗೆ ಹುರಿದ ಹುರಿಕಡಲೆ

ಅವಳರಳೆಳೆದ ಕೊಳಗದೊಳು ಇವಳರಳೆಳೆದಳು

ಜಂಬಗಿ ತೂಕಪ್ಪ ತುಂಬಿದ ತುಪ್ಪದ ತಂಬಿಗಿ ತಂದಾನ

ಅರಳೀಮರದೆಲೆತಳಿರೊಡೆದೆರಡೆಲೆಯಾಯ್ತು

ಅರಳೀಮರಬುಡ ತಳಿರೊಡೆದೆರಡೆಲೆ ಮತ್ತೆರಡೆಲೆ ಹೆಚ್ಚಾಯ್ತು

ತಾತಪ್ಪ ತುಂಬಿದ ತುಪ್ಪದ ತಂಬಿಗೆ ತಂದಾನ

ಒ೦ದಾಲದಮರದಡಿಯಲ್ಲೆರಡೆರಡರಣೆಗಳುರುಳುರುಳೋಡುತ್ತಿರುತ್ತಿರುತ್ತವೆ

ಬ೦ಕಾಪುರದ ಕೆ೦ಪು ಕು೦ಕುಮ

ಕುರುಗೋಡು ಕುಡುಗೋಲು

ಶ್ರೀಗಂಧದ ಕೊರಡು ತಳೆದು ತೊಳೆದು ಕೊರಡೆರಡಾಯಿತು

ಕಚ್ಚಾ ಪಾಪಡ್ ಪಕ್ಕಾ ಪಾಪಡ್

 ಕಾಗೆ ಗೂ ಗೂ, ಕಾ ಕಾ ಗೂಬೆ, ಬೆಕ್ಕು ಬೌ ಬೌ, ನಾ
ಯಿ ಮಿಯಾ೦ ಮಿಯಾ೦

ಗೊತ್ತಿದ್ದು ಗೊತ್ತಿದ್ದು ಗೊತ್ತಿಲ್ಲ ಅ೦ದ್ರೆ ಗೊತ್ತಿದ್ದು ಗೊತ್ತಾಗಲ್ಲ ಗೊತ್ತಿಲ್ದಿದ್ದು ಗೊತ್ತಾಗಲ್ಲ ಗೊತ್ತಯ್ತಾ..

ಮೇಲೆ ಇಪ್ಪು ಎಲ್ಲಾ ಪದನ್ ಒ೦ದ್ಸಲ ಓದಿ  ಬೆ ಬ್ಬೆ ಬ್ಬೆ ಅ೦ತ ಹೇಳಿದ್ರೆ ನಾ ಧನ್ಯ ಆಯ್ತಾ. ಇಲ್ಲಿ ಇರುದ್ಕಿ೦ತ ಬೇರೆ ಯಾವ್ದಾದ್ರು ನಿಮ್ಗ್ ಗೊತ್ತಿದ್ರೆ ನ೦ಗೂ ತೀಳ್ಸಿ ಆಯ್ತಾ…!

%d bloggers like this: