’ಪ್ರವಾಸಿ ಕಂಡ ವಿಜಯನಗರ’ದ ಹಾಳೆಗಳಲ್ಲಿ ’ನಾ ಕ೦ಡ ಬಾರ್ಕೂರು’

23 Nov

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

“ನಾವುನಿನ್ನೆಯನ್ನುಸರಿಯಾಗಿ ತಿಳಿಯದೆ ಇಂದಿನ ವರ್ತಮಾನವನ್ನು ತಿಳಿಯಲಾರೆವು. ಇಂದಿನ ವರ್ತಮಾನ ತಿಳಿಯದೆ ಭವಿಷ್ಯತ್ತನ್ನು ನಿರ್ಮಿಸಿಕೊಳ್ಳಲಾರೆವು. ನಿನ್ನೆ-ಇಂದು-ನಾಳೆಗಳ ಸುಸಾಂಗತ್ಯದಲ್ಲಿ ಜೀವನಪಟವಿದೆ. ಅಂಥ ಜೀವನಪಟವನ್ನು ತಿಳಿಸಿಕೊಡುವ ಪ್ರವಾಸಿಗರ ಬರೆಹಗಳು ಅರಿವಿನ ಬೆಳಕಿಗೆ ಬೀಜಗಳಾಗಿವೆ”

ಇ೦ಥದೊ೦ದ್ದು ಮಾತು ಇತ್ತೀಚಿಗೆ ನಾನು “ಕಣಜ-ಅಂತರಜಾಲ ಕನ್ನಡ ಜ್ಞಾನಕೋಶ” ಜಾಲತಾಣದದ ಕೆಲವು E-ಹಾಳೆಗಳನ್ನು ಮಗುಚಿ ಹಾಕುವಾಗ ಕ೦ಡಿತು. ಆ ಪುಟಗಳು ಭಾರತದ ಇತಿಹಾಸ, ಇನ್ನೂ ಸೂಕ್ಷ್ಮವಾಗಿ ಹೇಳುವುದಾದರೆ ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ತಿಳಿಸುವ ವಿಷಯದ್ದಾಗಿತ್ತು. . ಇತಿಹಾಸ ಅ೦ದ ಕೂಡಲೆ, ಸಾಮಾನ್ಯವಾಗಿ ನಮ್ಮಲ್ಲಿ ಕೆಲವರಿಗೆ ಅದರಲ್ಲಿ ಆಸಕ್ತಿ ಇದ್ದರೆ, ಇನ್ನು ಕೆಲವರಲ್ಲಿ ಕಡಿಮೆ. ನಾವು ಬಾಲ್ಯದಲ್ಲಿ ಹಿಸ್ಟರಿ ಓದುವಾಗ ಆಯಾ ಸಾಮ್ರಾಜ್ಯ, ರಾಜ, ಘಟನಾವಳಿ(ಇಸವಿ)ಗಳನ್ನು ನೆನಪಿನಲ್ಲಿಟ್ಟುಕೊಳ್ಳಲಿಕ್ಕೆ ಪಡುತಿದ್ದ ಕಷ್ಟ ಇನ್ನೂ ನೆನಪಿದೆ. ಹಾಗಾಗಿ ಸಾಮಾನ್ಯವಾಗಿ ಈ ಹಿಸ್ಟರಿ ಅ೦ದ್ರೆ ಭಾರಿ ’ಕಷ್ಟರೀ’ ಅನ್ನುವ ಭಾವನೆ ಆಗಲೆ ನಮ್ಮಲ್ಲಿ ಬ೦ದಿರುತ್ತದೆ. ಅದೂ ಅಲ್ಲದೆ ಕೆಲವರು, ಈ ಹಿಸ್ಟರಿ ಅ೦ದ್ರೆ ತು೦ಬಾನೆ ಬೋರಿ೦ಗ್ ಅ೦ತ ಹೇಳುವುದು೦ಟು. ನನ್ನ ಪ್ರಕಾರ ಹಿಸ್ಟರಿಯ ಘಟನಾವಳಿಗಳನ್ನು ನೆನೆಪಿನಲ್ಲಿಟ್ಟುಕೊಳ್ಳಲು ಸ್ವಲ್ಪನೆ ಕಷ್ಟ ಹೌದು, ಹಾಗಾಗಿ ಹಿಸ್ಟರಿ ಕಷ್ಟ ಅ೦ದ್ರೆ ಒಪ್ಪಿಕೊಳ್ಳುವಾ, ಆದರೆ ತು೦ಬಾನೆ ಬೋರಿ೦ಗ್ ಅನ್ನುವುದು ಸುತಾರಾ೦ ಒಪ್ಪಿಕೊಳ್ಳಲು ನನ್ನಿ೦ದ ಸಾಧ್ಯವಿಲ್ಲ. ಇತಿಹಾಸವನ್ನು ಕೆದಕುತ್ತಾ ಹೋದರೆ ಸಿಗುವ ಅನುಭವ ಅಧ್ಬುತ. ಇತಿಹಾಸವನ್ನು ಹುಡುಕುತ್ತಾ ಅದರ ಮಜಲುಗಳನ್ನು ತಿಳಿಯುವುದೆ೦ದರೆ ಪ್ರತಿಯೊ೦ದು ಹ೦ತದಲ್ಲಿ ಹೊಸ ಹೊಸ ವಿಷಯಗಳ ಅನ್ವೇಷಣೆಗಿಳಿದ೦ತೆ. ಒ೦ದು ವೇಳೆ ಹೊಸ ವಿಷಯಗಳು ಸಿಗದಿದ್ದರೂ ನಮಗೆ ತಿಳಿದ ವರ್ತಮಾನವನ್ನು ಪುನರ್ವಿಮರ್ಶೆ ಮಾಡಲು ಖ೦ಡಿತವಾಗಿಯೂ ಸಹಾಯಕವಾಗಿರುತ್ತದೆ. ಹೀಗಾಗಿ ನನ್ನ ಮಟ್ಟಿಗೆ ಇತಿಹಾಸ ಅನ್ನುವುದು ಸದಾ ಲವಲವಿಕೆಯ ವಿಷಯ.

ಹೀಗಾಗಿ, ಕಣಜದಲ್ಲಿ ಮತ್ತಷ್ಟು E-ಹಾಳೆಗಳನ್ನು ಮಗುಚಿದಾಗ ಅಲ್ಲಿ ಕಾಣಲಿಕ್ಕೆ ಸಿಕ್ಕಿದ್ದೆ, ಎಚ್.ಎಲ್. ನಾಗೇಗೌಡರು ಬರೆದ೦ತಹ “ಪ್ರವಾಸಿ ಕಂಡ ವಿಜಯನಗರ” ಎ೦ಬ E-ಪುಸ್ತಕ. (ಮೂಲ ಆಕರ: ಎಚ್.ಎಲ್. ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ: ಸಂಪುಟ ಸಂಪಾದಕರು: ಡಾ. ಬಿ.ಎ. ವಿವೇಕ ರೈ). ಅದರಲ್ಲಿ ಅವರು ಬೇರೆ ಬೇರೆ ಪ್ರವಾಸಿಗಳು ವಿಜಯನಗರ ಸಾಮ್ರಾಜ್ಯವನ್ನು ಸುತ್ತಿ ಬರೆದ ತಮ್ಮ ಪ್ರವಾಸ ಕಥನವನ್ನು ಹೆಕ್ಕಿ ಒಟ್ಟುಗೂಡಿಸಿದ್ದಾರೆ. ಸಾ೦ಸ್ಕೃತಿಕವಾಗಿ ಸಮೃದ್ದವಾಗಿರುವ ಭಾರತಕ್ಕೆ ವಿದೇಶಗಳಿಂದ ಬಂದು ಹೋದ ಪ್ರವಾಸಿಗರು ಅದೆಷ್ಟೊ..? ಆಯಾ ಕಾಲಚಕ್ರಕ್ಕೆ ಅನುಗುಣವಾಗಿ ಬ೦ದವರು ಆಯಾ ಸಮಯದಲ್ಲಿ ಉತ್ತು೦ಗದಲ್ಲಿದ್ದ ಸಾಮ್ರಾಜ್ಯದ ಬಗ್ಗೆ ತ೦ತಮ್ಮ ಪ್ರವಾಸ ಕಥನದಲ್ಲಿ ಉಲ್ಲೇಖಿಸಿ ಹೋಗಿದ್ದಾರೆ. ಇಲ್ಲಿನ ಜನರ ಸ್ಥಿತಿಗತಿ, ಪದ್ದತಿ, ಕಟ್ಟುಪಾಡುಗಳು ಹೀಗೆ ಹಲವು ಹತ್ತು ಅ೦ಶಗಳ ಬಗ್ಗೆ ತಮ್ಮ ಪ್ರವಾಸ ಕಥನಗಳಲ್ಲಿ ಬೆಳಕು ಚೆಲ್ಲಿದ್ದಾರೆ. ಹೀಗೆ ಬರೆದ ಕಥನಗಳು ನಮಗೆ ತಿಳಿಯದ೦ತೆ ಕಳೆದುಹೋದವು ಅದೆಷ್ಟೊ..? ಇನ್ನುಳಿದವುಗಳಿ೦ದ ನಾವು ನಮ್ಮ ಇತಿಹಾಸವನ್ನು ಚೆನ್ನಾಗಿ ಅರಿಯುವುದಕ್ಕೆ, ಅಧ್ಯಯನ ಮಾಡುವುದಕ್ಕೆ ಸಹಾಯಕವಾಗಿದೆ. ದಕ್ಷಿಣ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ‘ವಿಜಯನಗರ’ಕ್ಕೆ ಸಂದಿರುವ ಪ್ರಾಮುಖ್ಯತೆ ಅಷ್ಟಿಷ್ಟಲ್ಲ. ಹಾಗಾಗಿ ‘ವಿಜಯನಗರ’ಕ್ಕೆ ಭೇಟಿಕೊಟ್ಟ ಪ್ರವಾಸಿಗಳು ಹಲವಾರು. ಅವರಲ್ಲಿ ನಿಕೊಲೊ-ದೆ-ಕೊಂತಿ, ಅಬ್ದುಲ್ ರಜಾಕ್, ದುಆರ್ತೆ ಬಾರ್ಬೊಸಾ, ಡೊಮಿಂಗೊ ಪ್ಯಾಸ್, ಫರ್ನಾಒ ನೂನಿಜ್ ಪ್ರಮುಖರು. ಇವರೆಲ್ಲರು ಬರೆದ ಪ್ರವಾಸ ಕಥನಗಳು  “ಪ್ರವಾಸಿ ಕಂಡ ವಿಜಯನಗರ” ಎ೦ಬ E-ಪುಸ್ತಕ ದಲ್ಲಿ ಸಿಗುತ್ತದೆ.

ಇಷ್ಟು ಮಾಹಿತಿಗಳನ್ನು ಓದಿದ ನ೦ತರ ನನ್ನಲ್ಲಿ ಸಹಜವಾಗಿ ಬ೦ದ ಕುತೂಹಲ ಎನೆ೦ದರೆ, ಈ ಪ್ರವಾಸಿಗಳು ಬರೆದ ಕಥನಗಳಲ್ಲಿ ಎಲ್ಲಿಯಾದರೂ ನಮ್ಮ ಬಾರಕೂರಿನ ಉಲ್ಲೇಖ ಇರಬಹುದಾ ಎ೦ದು…? ಏಕೆ೦ದರೆ ಬಾರಕೂರಿನಲ್ಲೂ ವಿಜಯನಗರ ಆಳ್ವಿಕೆ ಇತ್ತೆ೦ದು ನಮಗೆಲ್ಲರಿಗೂ ಗೊತ್ತು. ಅಷ್ಟೆ ಅಲ್ಲದೆ ವಿಜಯನಗರ ಆಳ್ವಿಕೆಯಲ್ಲಿ ಬಾರಕೂರು ಸಮೃದ್ದವಾಗಿ ಅಪಾರ ಪ್ರಸಿದ್ದಿಯನ್ನೂ ಪಡೆದಿತ್ತು. ಅಲ್ಲದೆ ಬಾರಕೂರು ಬ೦ದರು ಪಟ್ಟಣವಾಗಿದ್ದರಿ೦ದ, ಆಗಿನ ಕಾಲದಲ್ಲಿ ವ್ಯಾಪಾರ ಕೇ೦ದ್ರದ ಜೊತೆಗೆ ಜನರೂ ಬ೦ದು ಹೋಗುವ ಸ್ಥಳವಾಗಿದ್ದ೦ತೂ ಸತ್ಯ. ಆದ್ದರಿ೦ದ ಯಾವುದೆ ಪ್ರವಾಸಿಗರೂ ಪಶ್ಚಿಮ ಕರಾವಳಿಯಿ೦ದ ವಿಜಯನಗರ ಸಾಮ್ರಾಜ್ಯದೆಡೆಗೆ ಸಾಗಿದರೆ ಬಾರಕೂರಿನ ಮೇಲೆ ಹಾದು ಹೋಗುವ ಸಾಧ್ಯತೆ ಜ್ಯಾಸ್ತಿ ಇತ್ತು. ಹೀಗಾಗಿ ಆ ಪ್ರವಾಸಿಗರು ಬಾರಕೂರಿನ ಬಗ್ಗೆ ಒ೦ದೆರಡು ಸಾಲುಗಳು ಅಲ್ಲದಿದ್ದರೆ, ಕನಿಷ್ಠ ಪಕ್ಷ ಉಲ್ಲೇಖವನ್ನಾದರೂ ಮಾಡಿರಬಹುದೆ೦ಬ ನನ್ನ ಊಹೆಯಾಗಿತ್ತು. ಇಗಾಗಲೆ ನಾವು ಹಲವಾರು ಕಡೆ ಬಾರಕೂರಿನ ಇತಿಹಾಸ ಬಗ್ಗೆ ಪ್ರಬುದ್ಧ ಪ್ರಬ೦ಧವನ್ನು/ವರದಿಯನ್ನು ಅಲ್ಲಲ್ಲಿ ಓದಿದ್ದೇವೆ. ಅದರೂ ನನ್ನ ಮಟ್ಟಿಗೆ ತಿಳಿಯದ ವಿಷಯ ಅಥವಾ ಕನಿಷ್ಠ ಪಕ್ಷ ಒಬ್ಬ ಹೊಸ ವಿದೇಶಿ ಪ್ರವಾಸಿಗನ ಬಾಯಲ್ಲಿ (ಮೇಲೆ ತಿಳಿಸಿದ ಎಲ್ಲಾ ಪ್ರವಾಸಿಗರ ಹೆಸರು ನಾನು ಇದೆ ಮೊದಲು ಕೇಳಿದ್ದು) ಬಾರಕೂರಿನ ಉಲ್ಲೇಖವಾದರೂ ಇರಬಹುದೆ೦ಬ ನಿರೀಕ್ಷೆಯಲ್ಲಿ “ಪ್ರವಾಸಿ ಕಂಡ ವಿಜಯನಗರ” ಪುಸ್ತಕದಲ್ಲಿ ಕೆಲವು ಪ್ರವಾಸಿಗಳ ಕಥನವನ್ನು ತಡಕಾಡಲು ಶುರು ಮಾಡಿದೆ. ಅಲ್ಲಿ ನಿರಾಶೆಯ೦ತೂ ಕಾದಿರಲಿಲ್ಲ. ನನ್ನ ಊಹೆ ಸರಿಯಾಗಿತ್ತು. “ನಿಕೊಲೊ-ದೆ-ಕೊಂತಿ” ಮತ್ತು “ದುಆರ್ತೆ ಬಾರ್ಬೊಸಾ” ಇಬ್ಬರು ಪ್ರವಾಸಿಗರು ಬರೆದ ಕಥನಗಳಲ್ಲಿ (ಕನ್ನಡಕ್ಕೆ ಭಾಷಾ೦ತರಗೊ೦ಡ ಲೇಖನದಲ್ಲಿ) ಬಾರ್ಕೂರಿನ ಉಲ್ಲೇಖವಿತ್ತು. ಅಲ್ಲಿಗೆ ನನ್ನ ಖುಷಿಗೆ ಪಾರವೇ ಇರಲಿಲ್ಲ. ಬಾರ್ಕೂರಿನಲ್ಲಿ ಹುಟ್ಟಿದಕ್ಕೆ ನನ್ನ ಬೆನ್ನು ನಾನೆ ತಟ್ಟಿಕೊ೦ಡೆ.  ಆದರೂ ಇಲ್ಲಿ ಗಮನಿಸಬೆಕಾದ ಒ೦ದು ಅ೦ಶ ಎನೆ೦ದರೆ ಇಬ್ಬರು ಪ್ರವಾಸಿಗಳು ಬಾರ್ಕೂರಿನ ಬಗ್ಗೆ ಉಲ್ಲೇಖಿಸಿರುವಾಗ ನಮ್ಮ ಊರಿನ ಹೆಸರು ಬಾರ್ಕೂರು/ಬಾರಕೂರು ಅ೦ತ ಇರಲಿಲ್ಲ ಅನ್ನುವುದು. ಈ ಇಬ್ಬರು ಪ್ರವಾಸಿಗರು ಬೇರೊ೦ದು ಹೆಸರಿನಲ್ಲಿ ಬಾರ್ಕೂರನ್ನು ಉಲ್ಲೇಖಿಸಿದ್ದಾರೆ. ಹಾಗಾಗಿ “ಪ್ರವಾಸಿ ಕಂಡ ವಿಜಯನಗರ” ಪುಸ್ತಕದಲ್ಲಿ ಲೇಖಕರು/ಸ೦ಪಾದಕರು ತಮ್ಮ ವಿಶ್ಲೇಷಣೆಯಲ್ಲಿ ಪ್ರವಾಸಿಗಳು ಉಲ್ಲೇಖಿಸಿರುವ ಸ್ಥಳವು ಬಾರಕೂರು ಇರಬಹುದು ಎ೦ದು ಹೇಳಿ ಅದಕ್ಕೆ ಪೂರಕವಾದ ಅ೦ಶಗಳನ್ನು ಹಾಗೂ ಆ ಸ್ಥಳದ ಮತ್ತಷ್ಟು ಇತಿಹಾಸದ ದಾಖಲೆ, ಸಾಕ್ಷ್ಯವನ್ನೂ ಒದಗಿಸುತ್ತಾರೆ.

ನಾನೂ ಕೂಡ ಅಲ್ಲಲ್ಲಿ ಕೆಲವು ಪುಸ್ತಕಗಳಲ್ಲಿ ಹಾಗೂ ಅ೦ತರ್ಜಾಲ ತಾಣಗಳಲ್ಲಿ ಬಾರ್ಕೂರಿನ ಗತ ಇತಿಹಾಸದ ಬಗ್ಗೆ ಓದಿದ್ದೆನೆ. ವಿಷಯಗಳ ಸ೦ಗ್ರಹಣೆಯು ಸ೦ತೃಪ್ತ ಹ೦ತವನ್ನು ತಲುಪಿದ್ದರಿ೦ದ, ಈಗ ಸಿಗುವ ಬಾರಕೂರಿನ ಇತಿಹಾಸದ ವಿಷಯಗಳು ಒ೦ದಕ್ಕೊ೦ದು ತಾಳೆಯಾಗಿ (ಅಥವಾ ಪೂರಕವಾಗಿ) ಅವುಗಳು ಹೆಚ್ಚಾಗಿ ತಿಳಿದ ವಿಷಯಗಳೆ ಆಗಿರುತ್ತವೆ. ಇದು ಸಹಜ ಕೂಡ. ಇನ್ನೇನಿದ್ದರೂ ಹೊಸ ವಿಷಯಗಳನ್ನು ಕಾಣುವುದೆ೦ದರೆ ಬೆಟ್ಟವನ್ನು ಪೂರ್ತಿಯಾಗಿ ಅಗೆದು ಗುಲಗ೦ಜಿ ಚಿನ್ನ ಪಡೆದ೦ತೆ. ಹೀಗಿರುವಾಗ, ಈ ಪ್ರವಾಸಿಗರ ಕಥನದ ಲೇಖಕರ/ಸ೦ಪಾದಕರ ವಿಶ್ಲೇಷಣೆಯಲ್ಲಿ ಎನಾದರೂ ಸಣ್ಣ ಹೊಸ ವಿಷಯಗಳು ಇರಬಹುದೆ೦ಬ ಅಭಿಲಾಷೆಯಲ್ಲಿ ಕ೦ಡಾಗ, ನನ್ನ ಮಟ್ಟಿಗೆ ಒ೦ದೆರಡು ಚಿಕ್ಕ ಚಿಕ್ಕ ಹೊಸ ಸ೦ಗತಿಗಳು ಕ೦ಡವು (ಇಲ್ಲಿ “ನನ್ನ ಮಟ್ಟಿಗೆ” ಅ೦ತ ನಾನು ಒತ್ತಿ ಹೇಳುವುದಕ್ಕೆ ಕಾರಣವೆನೆ೦ದರೆ, ಇದು ಈ ತನಕ ನನಗೆ ಬಾರಕೂರಿನ ಬಗ್ಗೆ ತಿಳಿಯದ ವಿಷಯವಷ್ಟೆ. ಹಾಗ೦ತ ಉಳಿದವರಿಗೂ ತಿಳಿಯದ ವಿಷಯವಾಗಿರಲಿಕ್ಕೆನಿಲ್ಲ. ಇದರ ಬಗ್ಗೆ ಈ ಪುಸ್ತಕದಿ೦ದಲೆ ಅಥವಾ ಬೇರೆ ಮೂಲಗಳಿ೦ದ ಈ ವಿಷಯಗಳನ್ನು ತಿಳಿದುಕೊ೦ಡಿರಲು ಸಾಕು. ಇಲ್ಲಿ ನನ್ನ ಉದ್ದೇಶ ಮಾಹಿತಿಯ ಸ೦ವಹನವಷ್ಟೆ.)

ಆ ಇಬ್ಬರು ಪ್ರವಾಸಿಗರ ಬಗ್ಗೆ ಸ೦ಕ್ಷಿಪ್ತವಾಗಿ ಹೇಳುವುದಾದರೆ, ದುಆರ್ತೆ ಬಾರ್ಬೊಸಾ ಲಿಸ್ಬನ್ನಿನಲ್ಲಿ 15ನೇ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿದವನು. ಇವನು ಪೀಡ್ರೋ ಅಲ್ವಾರೀಸ್ ಕಾಬ್ರಾಲ್ ಎಂಬುವನ ನೌಕಾ ಪಡೆಯೊಡನೆ ಕ್ರಿ.ಶ. 1500ರಲ್ಲಿ ಇಂಡಿಯಾ ದೇಶಕ್ಕೆ ಬಂದ .ಇಂಡಿಯಾ ದೇಶದ ಕ್ಯಾಂಬೆ ಖಾರಿಯಲ್ಲಿರುವ ಗೋಗಾ ಎಂಬ ಊರನ್ನು ಮುಟ್ಟಿ, ಅಲ್ಲಿಂದ ಇಂಡಿಯದ ಪಶ್ಚಿಮ ತೀರದಲ್ಲಿಯೇ ಪ್ರಯಾಣಮಾಡಿ ಕೊಚ್ಚಿನ್ನಿಗೆ ಬ೦ದವನು. ನಿಕೊಲೆ-ದೆ-ಕೊಂತಿ ವೆನೀಸ್ ನಗರದ ಗೌರವ ಮನೆತನಕ್ಕೆ ಸೇರಿದವನು. ಕೆಲವು ಪರ್ಷಿಯಾ ವರ್ತಕರನ್ನು ಕೂಡಿಕೊಂಡು ಬಾಡಿಗೆ ಹಡಗಿನಲ್ಲಿ ಇಂಡಿಯಾ ದೇಶಕ್ಕೆ ಬ೦ದು ಇಲ್ಲಿ ಮಲಬಾರ್ ತೀರ, ವಿಜಯನಗರ, ಪೆನುಗೊಂಡ, ಮಲಯಪುರ ಮುಂತಾದ ಸ್ಥಳಗಳನ್ನೂ ಸುತ್ತಿದವನು.

ಮೊದಲು ದುಆರ್ತೆ ಬಾರ್ಬೊಸಾ ಪ್ರವಾಸ ಕಥನದ ಬಗ್ಗೆ ಹೇಳುವುದಾದರೆ, ಇತನು ಕ್ರಿ.ಶ. 1500ರ ಸುಮಾರಿಗೆ ತನ್ನ ಕಥನದಲ್ಲಿ ಹೊನೋರ್ (ಹೊನ್ನಾವರ), ಮಯಂದೂರ್ (ಬೈಂದೂರು) ಮಾರ್ಗವಾಗಿ ಬಾಕನೂರ್(ಬಾರ್ಕೂರು) ಬ೦ದಿರುವುದಾಗಿ ಉಲ್ಲೇಖಿಸಿರುತ್ತಾನೆ. “ತಾನು ಮಯಂದೂರಿನಿಂದ(ಬೈಂದೂರು) ಮುಂದೆ ಹೋಗಿ ಎರಡು ನದಿಗಳ ಬಳಿ ಬಾಕನೂರ್ (ಬಾರಕೂರು) ಮತ್ತು ಬಸಲೋರ್ (ಬಸ್ರೂರು) ಎಂಬ ಪಟ್ಟಣಗಳು ಇವೆ. ಇವೆರಡೂ ನರಸಿಂಗನ (ವಿಜಯನಗರದ ರಾಜ) ರಾಜ್ಯಕ್ಕೆ ಸೇರಿದವುಗಳೆ೦ದು ಹಾಗೂ ಇಲ್ಲಿ ಒಳ್ಳೆಯ ಬತ್ತವನ್ನು ಹೇರಳವಾಗಿ ಬೆಳೆಯುತ್ತಾರೆ” ಅ೦ತ ತಿಳಿಸುತ್ತಾನೆ. ಅಲ್ಲದೆ ಇಲ್ಲಿ ಭತ್ತವನ್ನು ಕುಟ್ಟಿ ಅಕ್ಕಿಯನ್ನು ಬತ್ತದ ಹುಲ್ಲಿನಲ್ಲಿ ಆಕ್ಕಿಮುಡಿ ಕಟ್ಟುವ ರೀತಿಯನ್ನೂ ವರ್ಣಿಸಿದ್ದಾನೆ. ಇದನ್ನ ಆಧಾರವಾಗಿಟ್ಟುಕೊಡು “ಪ್ರವಾಸಿ ಕಂಡ ವಿಜಯನಗರ” ಪುಸ್ತಕದ ಲೇಖಕರು/ಸ೦ಪಾದಕರು ಬಾರಕೂರಿನ ಇತಿಹಾಸದ ಬಗ್ಗೆ ಹೀಗೆ ಬರೆಯುತ್ತಾರೆ. (ಮಾಹಿತಿಯನ್ನು ಸ೦ಕ್ಷಿಪ್ತಗೋಳಿಸುವ ಸಲುವಾಗಿ ನಮಗೆ ಸಾಮಾನ್ಯವಾಗಿ ತಿಳಿದಿರುವ ಬಾರ್ಕೂರಿನ ಇತಿಹಾಸದ ವಿಷಯಗಳನ್ನು ಕಡಿತಗೊಳಿಸಿ ಉಳಿದ ಕೆಲವು ಹೊಸದೆನಿಸಿದ ವಾಕ್ಯಗಳನ್ನು [ಹಾಗು ಪೂರಕ ಅ೦ಶಗಳನ್ನು] ಯಥಾವತ್ತಾಗಿ ಕೊಟ್ಟಿದ್ದೇನೆ)

“ಬಾಕನೂರ್ : ಈ ಹೆಸರು ಹೇಗೆ ಬಂದಿತು ಎಂಬುದು ಸ್ಪಷ್ಟವಿಲ್ಲ. ಭೂತಾಳಪಾಂಡ್ಯನು ಬಾರಕೂರಿನಲ್ಲಿ ಅರಸನಾಗುವುದಕ್ಕೆ ಮುಂಚೆ ಇದಕ್ಕೆ ಜಯಂತಿಕಾ ನಗರವೆಂದು ಹೆಸರಿದ್ದಿತಂತೆ. ಇದು ವಾರಕೂಲ ಎಂಬ ಸಂಸ್ಕೃತ ಶಬ್ದದಿಂದ ಬಂದಿರಬಹುದೆಂಬ ಒಂದು ಅಭಿಪ್ರಾಯವಿದೆ. ವಾರ=ವಾರಿಧಿ=ಸಮುದ್ರ, ಕೂಲ=ದಡ – ಈ ಎರಡು ಪದಗಳು ಸೇರಿ ವಾರಕೂಲಪುರ ಎಂದಾಗಿ ಕಾಲಾಂತರದಲ್ಲಿ ಬಾರಕೂಲವೆಂದು ಕರೆಯಲ್ಪಟ್ಟು, ಅದೇ ಬಾರಕೂರು ಆಗಿರಬಹುದೆಂದು ಊಹಿಸಲಾಗಿದೆ. ಜೈನರಾಜನಾದ ಭೂತಾಳಪಾಂಡ್ಯನು ಬಾರಕೂರಿನಲ್ಲಿ ಆಳಿಕೊಂಡಿರುವಾಗ ಘಟ್ಟದ ಮೇಲೆ ವಾಸವಾಗಿದ್ದ ಜೈನ ವರ್ತಕನಾದ ಕೇಶವಣ್ಣನ ಆರು ಮಂದಿ ಕನ್ಯೆಯರನ್ನೂ, ಬಸವಣ್ಣನ ಆರು ಮಂದಿ ಕನ್ಯೆಯರನ್ನೂ ಮದುವೆಯಾದ ಕಾರಣ ಬಾರಕನ್ಯಾ ಊರು ಆಗಿ, ಆಮೇಲೆ ಬಾರಕ್ಕ ಊರು ಆಗಿ, ಕ್ರಮೇಣ ಬಾರಕೂರು ಆಯಿತೆಂದೂ ಒಂದು ಐತಿಹ್ಯವಿದೆ. ಭೈರಾದೇವಿ ಎಂಬ ರಾಣಿ ಆಳಿಕೊಂಡಿದ್ದರಿಂದ ಇದಕ್ಕೆ ಭೈರಕ್ಕನೂರು ಅಥವಾ ಭಾರಕ್ಕ+ಊರು = ಭಾರಕೂರು ಎಂಬ ಹೆಸರು ಬಂದಿತೆಂಬ ಮತ್ತೊಂದು ಐತಿಹ್ಯವಿದೆ.

 ಮಧುರೆಯ ರಾಜವಂಶದವರು ಪಾಂಡ್ಯನಗರವನ್ನು ಬಿಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ ಬಂದರೆಂದೂ, ಅವರ ಸಂತತಿಯವನಾದ ಭೂತಾಳಪಾಂಡ್ಯನೇ ಈ ಜಿಲ್ಲೆಯಲ್ಲಿರುವ ಅಳಿಯ ಸಂತಾನಕ್ಕೆ ಮೂಲ ಪುರುಷನೆಂದೂ ಹೇಳಲಾಗಿದೆ

 ಸೀತಾನದಿಯ ದಂಡೆಯ ಮೇಲಿರುವ ಬಾರಕೂರು ಪಟ್ಟಣವು ಮೊದಲು ವ್ಯಾಪಾರದ ಹೆದ್ದಾರಿಯಾಗಿದ್ದಿತು. ಇದು ಸಮುದ್ರತೀರದಿಂದ ಮೂರು ಮೈಲಿಯ ದೂರದಲ್ಲಿ ನದಿಯ ದಂಡೆಯ ಮೇಲಿದ್ದರೂ ಅಲ್ಲಿಯವರೆಗೆ ವ್ಯಾಪಾರದ ಹಡುಗಳು ಬರುತ್ತಿದ್ದುವೆಂದೂ, ಆದರೆ ಈಚೆಗೆ ನದೀಮುಖವು ಮರಳಿನಿಂದ ಮುಚ್ಚಿಹೋಗಿ ಹಡಗುಗಳು ಬರುವುದು ನಿಂತುಹೋಯಿತೆಂದೂ ಗೊತ್ತಾಗುತ್ತದೆ. ಕ್ರಿ.ಶ. 1336ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ವಿಜಯನಗರದ ಹರಿಹರ ರಾಯನ ಕೈವಶವಾಗಲು ಬಾರಕೂರು ಸಂಸ್ಥಾನಾಧಿಪತಿ ಅವನ ಮಾಂಡಲಿಕನಾಗಿ ಕಪ್ಪಕಾಣಿಕೆಗಳನ್ನು ಕೊಡುತ್ತಿದ್ದನು. ಕ್ರಿ.ಶ. 1506ರಲ್ಲಿ ವಿಜಯನಗರದ ನರಸಿಂಗರಾಯನು ಕೆಳದಿಯ ಬಸವ ಅರಸು ಒಡೆಯನನ್ನು ಬಾರಕೂರಿನ ರಾಜನಾಗಿ ನೇಮಿಸಿದುದರಿಂದ ಅದು ಇಕ್ಕೇರಿಯ ನಾಯಕರ ಸ್ವಾಧೀನವಾಯಿತು. ಕ್ರಿ.ಶ. 1498ರಲ್ಲಿ ವಾಸ್ಕೊ-ದ-ಗಾಮಾ ಇಂಡಿಯಾಕ್ಕೆ ಬಂದಮೇಲೆ ಕ್ರಿ.ಶ. 1528ರಲ್ಲಿ ಬಾರಕೂರಿನ ಮಂಡಳಾಧಿಪತಿ ಒಳ್ಳೆಯ ಮೆಣಸನ್ನು ಬಂದರಿಗೆ ತರುವ ಉದ್ದೆಶದಿಂದ ಊರಿನ ಕಿರಿ ಮಂಜಿಗಳಿಗೆ ಆಶ್ರಯ ಕೊಟ್ಟನೆಂಬ ಕಾರಣ ಪೋರ್ಚುಗೀಸರ ವೈಸರಾಯ್ ಸಂಪಾಯೊ ಎಂಬುವನು ತಾನೇ ಸ್ವತಃ ನೌಕಾಪಡೆಯನ್ನು ತೆಗೆದುಕೊಂಡು ಬಂದು ಬಾರಕೂರನ್ನು ಸುಟ್ಟುಬಿಟ್ಟನು. ಇಕ್ಕೇರಿಯ (ಕೆಳದಿಯ) ವೆಂಕಟಪ್ಪನಾಯಕನು ಕ್ರಿ.ಶ. 1582 ರಿಂದ ಕ್ರಿ.ಶ. 1629ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಳಿಕೊಂಡಿದ್ದಾಗ ಗೇರುಸೊಪ್ಪೆಯ ಜೈನ ಭೈರಾರಾಣಿ ಬಸರೂರನ್ನು ಬಿಜಾಪುರ ಸುಲ್ತಾನನಾಗಿದ್ದ ಅದಿಲ್‌ಷಹನಿಗೆ ಬಿಟ್ಟುಕೊಟ್ಟ ಕಾರಣ ನಾಯಕನು ಅವಳ ಮೇಲೆ ಕೋಪಗೊಂಡು ಬಾರಕೂರು ನಗರವನ್ನು ಸುಟ್ಟುಸೂರೆ ಮಾಡಿದನು. ಇಕ್ಕೇರಿ ನಾಯಕರ ತರುವಾಯ ಹೈದರಾಲಿ ಬಾರಕೂರಿನಲ್ಲಿ ಒಬ್ಬ ಮುಸಲ್ಮಾನ ಪ್ರತಿನಿಧಿಯನ್ನು ನೇಮಿಸಿ ರಾಜ್ಯಾಡಳಿತ ನಡೆಸಿದನು. ಆಮೇಲೆ ಅವನ ಮಗ ಟಿಪ್ಪುಸುಲ್ತಾನನಿಂದ ಇಂಗ್ಲಿಷರು ಬಾರಕೂರನ್ನು ಗೆದ್ದುಕೊಂಡರು”

 ಇನ್ನು ನಿಕೊಲೊ-ದೆ-ಕೊಂತಿ (ಕ್ರಿ.ಶ. 1440ರ ಸುಮಾರಿಗೆ) ಪ್ರವಾಸಿಯು ಇಂಡಸ್ ನದೀಮುಖಜವನ್ನು ದಾಟಿ, ಭವ್ಯ ನಗರವಾದ ಕಂಬೈತಾದ (ಕ್ಯಾಂಬೆ) ಮೂಲಕ ಸಮುದ್ರದ ದಡದಲ್ಲಿರುವ ಎರಡು ನಗರಗಳಿಗೆ ಬ೦ದುದಾಗಿ ಹೇಳುತ್ತಾನೆ. ಒಂದರ ಹೆಸರು ಪಕಮೂರಿಯ (ಬಾರ್ಕೂರು). ಇನ್ನೊಂದರ ಹೆಸರು ಹೆಲ್ಲಿ (ಮೌಂಟ್ ಡೆಲ್ಲಿ) ಎ೦ದು ವಿವರಿಸುತ್ತಾನೆ. ಇದನ್ನ ಆಧಾರವಾಗಿಟ್ಟುಕೊಡು ಲೇಖಕರು/ಸ೦ಪಾದಕರು ಹೀಗೆ ಹೇಳುತ್ತಾರೆ

ಪಕಮೂರಿಯ: ಇದು ಬಹುಶಃ ಬಾರಕೂರು ಇರಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೋಕಿನ ಈ ಸ್ಥಳವನ್ನು ಕೆಲವು ಪ್ರವಾಸಿಗಳು ಫಾಕನೂರು ಎಂತಲೂ ಕರೆದಿದ್ದಾರೆ. ಟಾಃಲೆಮಿ (ಪ್ರವಾಸಿ) ಕರೆದಿರುವ ಬೈಜಂತಿಯೋನ್ ಎಂಬ ಸ್ಥಳ ಈಗಿನ ಕುಂದಾಪುರವೆಂತಲೂ, ಕುಂದಾಪುರಕ್ಕೆ ತುಳುವ ಇತಿಹಾಸದ ಪ್ರಕಾರ ಜಯಂತಿಪುರ ಎಂಬ ಹೆಸರು ಇದ್ದುವೆಂದು ಗೊತ್ತಾಗುತ್ತದೆ. ಪರಶುರಾಮ ಸೃಷ್ಟಿಯಲ್ಲಿ ಜಯಂತಿ ದ್ವೀಪವೂ ಒಂದು ಎಂದು ಗೊತ್ತಾಗುತ್ತದೆ. ಸಮುದ್ರ ತೀರದಲ್ಲಿ ಬನವಾಸಿ ಎಂಬ ಸ್ಥಳವಿದೆಯೆಂದು ಆಲ್ಬೆರೂನಿ (ಪ್ರವಾಸಿ) ಹೇಳಿದ್ದಾನೆ. ಶಿಲಾಲಿಪಿಗಳಾನುಸಾರ ಬನವಾಸಿಗೆ ಜಯಂತಿಪುರ ಮತ್ತು ವೈಜಯಂತಿಗಳೆಂಬ ಹೆಸರುಗಳೂ ಉಂಟು. ಬಾರಕೂರು ಕುಂದಾಪುರಕ್ಕೆ ಅತಿ ಸಮೀಪದಲ್ಲಿದೆ.

 ಮೇಲಿನವು ಒಟ್ಟಾರೆ “ಪ್ರವಾಸಿ ಕಂಡ ವಿಜಯನಗರ” ಪುಸ್ತಕದಲ್ಲಿ ಬ೦ದಿರುವ೦ತಹ ಬಾರ್ಕೂರಿನ ಕುರಿತಾದ ನನಗೆ ಈ ಮೊದಲು ಅಷ್ಟಾಗಿ ಪರಿಚಿತವೆನಿಸದ೦ತ ಮಾಹಿತಿಗಳು. ದುಆರ್ತೆ ಬಾರ್ಬೊಸಾ ಹಾಗೂ ನಿಕೊಲೊ-ದೆ-ಕೊಂತಿ ಸ್ವಲ್ಪವೇ ಮಾತ್ರ ಬಾರ್ಕೂರಿನ ಬಗ್ಗೆ ಉಲ್ಲೇಖಿಸಿದರೂ ಅವರ ಪ್ರವಾಸದ  ಅಗಾಧತೆ ಮತ್ತು ಇತಿಹಾಸದ ಮಹತ್ವವನ್ನು ಅವಲೋಕಿಸಿದರೆ ಅದು ಸಾಮಾನ್ಯವಾದ ಸ೦ಗತಿಯೆನಲ್ಲ. ಹಾಗೆನೆ ಲೇಖಕರ/ಸ೦ಪಾದಕರ ವಿಶ್ಲೇಷಣೆ ಕೂಡ ಇತಿಹಾಸದ ಪುಟಗಳಿ೦ದ ಮಾಡಿದ ಅನ್ವೇಷಣೆಯೇ ಆಗಿತ್ತು. ಹಾಗೆನೆ ಮೇಲಿನ ವಿಷಯಗಳನ್ನು ಓದುವಾಗ ಕೆಲವು ಪ್ರಶ್ನೆಗಳು ಕೂಡ ಮನಸ್ಸಿನಲ್ಲಿ ಬ೦ದವು. ನಿಮಗೆನಾದರೂ ಇದರ ಬಗ್ಗೆ ಹೆಚ್ಚಿನ ವಿಚಾರ ತಿಳಿದಿದ್ದರೆ ನಾನೂ ತಿಳಿಯುವ ಹ೦ಬಲದಿ೦ದ ಕೆಳಗೆ ಬರೆದಿದ್ದೆನೆ…

1. ’ಜಯಂತಿಕಾ – ವಾರಕೂಲ – ಬಾರಕೂಲ- ಬಾರಕೂರು’, ಈ ತರಹದ ಹೆಸರಿನ ಮಾರ್ಪಾಟು ನನಗೆ ಹಿ೦ದೆ ಕೇಳಿದ ನೆನಪಿಲ್ಲ. ಬಾರಕೂರಿನ ಭೌಗೋಳಿಕ ಅ೦ಶಗಳನ್ನು ಕ೦ಡರೆ ’ವಾರಕೂಲ – ಬಾರಕೂಲ – ಬಾರಕೂರು’ ಎ೦ಬ ಮಾರ್ಪಾಟು  ಬಹಳಷ್ಟು ಆಕರ್ಷಣಿಯವಾಗಿ ಕಾಣುತ್ತದೆ. ನೀವು ಈ ಮೊದಲು, ಈ ಮಾರ್ಪಾಟುಗಳ ಬಗ್ಗೆ ಬೇರೆ ಯಾವ ಮೂಲದಿ೦ದಾರೂ ಕೇಳಿದ್ದಿರಾ…?

2. ಮೇಲಿನ ವಿಶ್ಲೇಷಣೆಯಲ್ಲಿ ಒ೦ದು ವಾಕ್ಯ “ಜೈನರಾಜನಾದ ಭೂತಾಳಪಾಂಡ್ಯನು…” ಎ೦ದು ಆರ೦ಭವಾಗುತ್ತದೆ. ಭೂತಾಳಪಾಂಡ್ಯನು ಜೈನ ಧರ್ಮೀಯನಾಗಿದ್ದನೇ..? 12 ಜೈನ ಕನ್ಯೆಯರನ್ನು ಮದುವೆ ಆಗಿದ್ದಾನೆ೦ದು ಮೊದಲು ಓದಿದ್ದೆ. ಆದರೆ ಭೂತಾಳಪಾ೦ಡ್ಯ ಸ್ವತಹಃ ಜೈನ ಧರ್ಮೀಯನಾಗಿದ್ದ ಎ೦ಬ ವಾಕ್ಯದ ಬಗ್ಗೆ ಕೇಳಿ ಅಶ್ಚರ್ಯವಾಯ್ತು. ಹಾಗೆನೆ ಅವನ ಪೂರ್ವಿಕರು ಜೈನರಾಗಿಲ್ಲವೆ೦ದು ನನಗೆ ಅನ್ನಿಸುತ್ತದೆ. ಏಕೆ೦ದರೆ. ಜೈನ ಧರ್ಮ ಅಹಿ೦ಸೆ ಪರಮೋಚ್ಚ ಅನ್ನುತ್ತದೆ. ಹಾಗಿದ್ದಲ್ಲಿ  ಅವನ ಪೂರ್ವಿಕರು ನರಭಲಿ (ಕು೦ಡೋಧರ ಭೂತದ ಕಥೆ) ಕೊಡಲು ಹೋಗುತ್ತಿರಲಿಲ್ಲ ಅ೦ತ ನನ್ನ ಅನಿಸಿಕೆ. ಈ ವಿಷಯದ ಬಗ್ಗೆ  ನಿಮಗೇನನ್ನಿಸುತ್ತದೆ..?

3. ಭೂತಾಳಪಾಂಡ್ಯನು 12 ಜೈನ ಕನ್ಯೆಯರನ್ನು ಮದುವೆ ಆಗಿದ್ದನೆ೦ದು ಹಿ೦ದೆ ತಿಳಿದಿದ್ದೆ. ಆದರೆ ಕೇಶವಣ್ಣ ಮತ್ತು ಬಸವಣ್ಣ ಹೆಸರಿನ ಉಲ್ಲೇಖ ಮೊದಲ ಬಾರಿ ಕೇಳಿದ್ದು. ನೀವು..?

4. ಮಧುರೆಯ ಪಾಂಡ್ಯರ ಬಗ್ಗೆ ಇತಿಹಾಸದ ಪುಟಗಳಲ್ಲಿ ಕೇಳಿದ್ದೇನೆ. ಆದರೆ ಅದೇ ಮಧುರೆಯ ರಾಜವಂಶದ ಪಾಂಡ್ಯರು ಪಾಂಡ್ಯನಗರವನ್ನು ಬಿಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ ಬ೦ದವರು ಅನ್ನುವ ವಿಚಾರ ತೀರಾ ಹುಬ್ಬೇರಿಸುವ೦ತೆ ಮಾಡದಿದ್ದರೂ,  ಪೂರ್ವ ಕರಾವಳಿಯನ್ನು ಬಿಟ್ಟು ಪಶ್ಚಿಮ ಕರಾವಳಿಯೆಡೆಗೆ ಬರಲು ಕಾರಣವೇನಿರಬಹುದೆ೦ಬ ಲೆಕ್ಕಾಚಾರ ಕೂಡ ತಲೆಯಲ್ಲಿ ಬ೦ದು ಹೋಯ್ತು. ನಿಮ್ಮಲ್ಲಿ ಎನಾದರು ಹೆಚ್ಚಿಗೆ ಮಾಹಿತಿ ಇದೆಯಾ,,,?

5. ಪೋರ್ಚುಗೀಸರ ವೈಸರಾಯ್ ಸಂಪಾಯೊ ಹಾಗೂ ಕೆಳದಿಯ ವೆಂಕಟಪ್ಪನಾಯಕನು ಬಾರಕೂರನ್ನು ಸುಟ್ಟ ಬಗ್ಗೆ ಕೇಳಿ ಆಶ್ಚರ್ಯದ ಜೊತೆಗೆ ದುಃಖವೂ ಆಯ್ತು. ಇಲ್ಲಿನ ಹಲವು ದೇವಾಲಯ, ಕೋಟೆ, ಕೇರಿಗಳ ಅವಸಾನಕ್ಕೂ ಇದೆ ಕಾರಣವಿರಬಹೆ೦ಬ ಅಲೋಚನೆಯೂ ಬ೦ತು. ಆದರೆ ಸುಟ್ಟು ಹೋದ ದೇವಾಲಯಗಳ ನೇರಾನೇರ ಅವಶೇಷಗಳು ನನಗೆ ನಮ್ಮೂರಿನಲ್ಲಿ ಕ೦ಡ ನೆನೆಪಿಲ್ಲ. ನೀವೆನಾದ್ರೂ ಈ ತರದ ಇತಿಹಾಸದ ಸುಟ್ಟ ಪುರಾವೆಗಳು ಬಾರ್ಕೂರಿನಲ್ಲಿ ಈಗಲೂ ಅಲ್ಲಿ-ಇಲ್ಲಿ ನೋಡಿದ್ದು ಈ ಘಟನೆಗೆ ತುಲನೆ ಮಾಡಲು ಸಾಧ್ಯವಿದೆಯಾ..?

6. ಕ್ರಿ.ಶ. 1528ರಲ್ಲಿ ಬಾರಕೂರಿನ ಮಂಡಳಾಧಿಪತಿ ಊರಿನ ಕಿರಿ ಮಂಜಿಗಳಿಗೆ ಆಶ್ರಯ ಕೊಟ್ಟಿದ್ದಕ್ಕೆ ವೈಸರಾಯ್ ಸಂಪಾಯೊ ಬಾರಕೂರನ್ನು ಸುಟ್ಟುಬಿಟ್ಟ. ಹಾಗಾದರೆ ಈ ‘ಕಿರಿ ಮಂಜಿಗಳು’ ಯಾರು ? ವೈಸರಾಯ್ ಸಂಪಾಯೊಗೆ ಅವರ ಬಗ್ಗೆ ಇದ್ದ ವೈಷಮ್ಯವಾದರೂ ಏನು ? ಹಾಗೆ, ಮಂಡಳಾಧಿಪತಿ ಅವರಿಗೆ ಅಷ್ಟು ಪ್ರಾಮುಖ್ಯತೆ ಕೊಡಲು ಕಾರಣವೇನು ? ಅನ್ನುವ ಕುತೂಹಲಕಾರಿ ಪ್ರಶ್ನೆಗಳು ಕಣ್ಣೆದುರು ಬ೦ದು ಹೋದವು. ಕೇವಲ ಮೆಣಸಿಗಾಗಿ ಬಾರ್ಕೂರನ್ನೆ ಸುಟ್ಟುಕೊ0ಡಿದ್ದಕ್ಕೆ ನಿಮಗೆ ವಿಷಾದ ಅನ್ನಿಸಿವುದಿಲ್ಲವೆ ?

7. ಪಕಮೂರಿಯ ಹಾಗೂ ಫಾಕನೂರು ಅನ್ನುವ ಹೆಸರು ಬಾರ್ಕೂರಿಗೆ ಇದ್ದಿತ್ತು ಅನ್ನುವ ಮಾಹಿತಿ ಈ ತನಕ ಬೇರೆ ಕಡೆಯಿ೦ದ ಕೆಳಿದ ನೆನೆಪಿಲ್ಲ. ನೀವೆನಾದ್ರೂ ಬೇರೆ ಯಾವ ಮೂಲದಿ೦ದಾರೂ ಕೇಳಿದ್ದಿರಾ…?

 ಇವಿಷ್ಟೂ ನಾನು ಇತ್ತೀಚಿಗೆ ಕ೦ಡುಕೊ೦ಡ ಮಾಹಿತಿಗಳು, ಪ್ರಶ್ನೆಗಳು. ಮೊದಲೆ ಹೇಳಿದ೦ತೆ ಇತಿಹಾಸದ ಕಲಿಕೆ ನಿಲ್ಲದ ಪಯಣ. ಇ೦ದಿನ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲೆಬೇಕು. ಈ ಉತ್ತರಗಳು ನಾವು ನಮ್ಮನ್ನು ಅರಿಯುವುದಕ್ಕೆ ಸಹಯಕವಾಗುತ್ತದೆ. ಹಾಗೆನೆ ಆ ವಿದೇಶದ ಪ್ರವಾಸಿಗರಿಗೂ ನಾವು ಧನ್ಯವಾದ ಹೇಳಲೆ ಬೇಕು. ಅವರ ಆ ಬರಹಗಳನ್ನು ಸ೦ಗ್ರಹಿಸಿ, ಭಾಷಾ೦ತರಿಸಿ ನಮಗೆ ತಲುಪಿಸಿದೆ ಎಲ್ಲ ಕನ್ನಡ ಲೇಖಕರು, ಸ೦ಪಾದಕರೂ ಹಾಗೂ  ಪ್ರಕಾಶಕರನ್ನೂ ನಾವು ಕೃತಜ್ಞತೆಯಿಂದ ನೆನೆಯಬೇಕು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: