Archive | October, 2012

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು…!

31 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

 ನಮ್ಮೆಲ್ಲರ ನಡೆ ನುಡಿ ಕನ್ನಡವಾಗಲಿ……
ಹಾಗೆನೆ ಉದ್ಯೋಗ ನಿಮಿತ್ತ ಹೊರ ದೇಶದಲ್ಲಿ ನೆಲೆಸಿರುವ ನನ್ನ ಮಿತ್ರರಿಗೆಲ್ಲಾ ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..!!!

ಕನ್ನಡದ ಮೊದಲನೆ ಶಾಸನವಾದ ’ಹಲ್ಮಿಡಿ ಶಾಸನ’ದ ಬಗ್ಗೆ ಒ೦ದೆರಡು ಮಾಹಿತಿಯನ್ನು ಮನನ ಮಾಡಿಕೊಳ್ಳುವಾ…!!

ಹಲ್ಮಿಡಿ ಶಾಸನದ ಪಠ್ಯ
ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್ ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ಶ್ರೀಮತ್ ಕದಂಬಪನ್ ತ್ಯಾಗ ಸಂಪನ್ನನ್ ಕಲಭೋ[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್ ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ಅಳಪ ಗಣ ಪಶುಪತಿಯಾ ದಕ್ಷಿಣಾಪಥ ಬಹುಶತಹವನಾಹವದು[ಳ್] ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋ[ನ್ದಾನ]ಪಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ zಸೇನ್ದ್ರಕ ಬಣೋಭಯ ದೇಶದಾ ವೀರಪುರುಷಸಮಕ್ಷದೆ ಕೇಕಯ ಪಲ್ಲವರಂ ಕಾದೆಱದು ಪೆತ್ತಜಯನಾ ವಿಜ ಅರಸಂಗೆ ಬಾಳ್ಗೞ್ಚು ಪಲ್ಮಡಿಉಂ ಮೂೞುವಳ್ಳಿಉಂ ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ಕೞ್ದೋನ್ ಮಹಾಪಾತಕನ್  ಸ್ವಸ್ತಿ ಭಟ್ಟರ್ಗ್ಗೀಗೞ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕರ

ಹಲ್ಮಿಡಿ ಶಾಸನ ವಿವರಗಳು
ಹಲ್ಮಿಡಿ ಶಾಸನವು ಕನ್ನಡ ಭಾಷೆಯಲ್ಲಿ ಸಿಕ್ಕಿರುವ ಅತ್ಯಂತ ಹಳೆಯ ಶಾಸನ.ಇದು ಕನ್ನಡದ ಹಿರಿಮೆಯನ್ನು ದಾಖಲಿಸಿರೋ ಮೊಟ್ಟಮೊದಲ ಶಾಸನ. ಇದು ಸಿಕ್ಕಿದ ಜಾಗದ ಹೆಸರು ಹಾಸನ ಜಿಲ್ಲೆಯ ಬೇಲೂರಿನ ಸಮೀಪದಲ್ಲಿರುವ ಹಲ್ಮಿಡಿ . ಹಾಗಾಗಿ ಇದನ್ನು ಹಲ್ಮಿಡಿ ಶಾಸನ ಅಂತಾನೆ ಕರೀತಾರೆ. ಇದರ ಕಾಲವು ಕ್ರಿ.ಶ. 450.  ಈಗ ಇದನ್ನು ಕರ್ನಾಟಕ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯ ನಿರ್ದೇಶಕರ ಕಚೇರಿಯ ಆವರಣದಲ್ಲಿ ಇಡಲಾಗಿದೆ.(ಮೈಸೂರು) ಹಲ್ಮಿಡಿಯಲ್ಲಿ ಇದರ ಫೈಬರ್ ಗ್ಲಾಸ್ ನಕಲೊಂದನ್ನು ಪ್ರತಿಷ್ಠಾಪಿಸಲಾಗಿದೆ.

ಶಾಸನಶಿಲೆಯು ನಾಲ್ಕು ಅಡಿ ಎತ್ತರ, ಒಂದು ಅಡಿ ಅಗಲ ಮತ್ತು ಮುಕ್ಕಾಲು ಅಂಗುಲ ದಪ್ಪ ಇದೆ. ಈ ಶಾಸನದಲ್ಲಿ ಹದಿನಾರು ಸಾಲುಗಳಿವೆ. ಮೊದಲ ಸಾಲನ್ನು ಶಿಲೆಯ ಮೇಲುಭಾಗದಲ್ಲಿ ಕುದುರೆ ಲಾಳದ ಆಕೃತಿಯಲ್ಲಿ ಕೆತ್ತಲಾಗಿದೆ. ನಂತರದ ಹದಿನಾಲ್ಕು ಸಾಲುಗಳು ಶಾಸನದ ಫಲಕದ ಮೇಲೆ ಬರೆಯಲ್ಪಟ್ಟಿವೆ. ಕೊನೆಯ ಸಾಲನ್ನು, ಶಾಸನದ ಬಲ ಬದಿಯಲ್ಲಿ ಕೆಳಗಿನಿಂದ ಮೇಲೆ ಕೆತ್ತಲಾಗಿದೆ. ಮೊದಲ ಹದಿನೈದು ಸಾಲುಗಳ ಲಿಪಿಯು ಪಶ್ಚಿಮ ಘಟ್ಟಗಳ ಗವಿಗಳಲ್ಲಿ ದೊರೆತಿರುವ ಗುಹಾಲಿಪಿಯನ್ನು ಅಂತೆಯೇ ಶಾತವಾಹನರ ಕಾಲದ ಶಾಸನಗಳ ಲಿಪಿಯನ್ನು ಹೋಲುತ್ತದೆ. ಕದಂಬರ ಕಾಕುಸ್ಥವರ್ಮನ ತಾಳಗುಂದದ ಶಾಸನದ ಲಿಪಿಗೂ ಇದಕ್ಕೂ ಆಂಶಿಕವಾದ ಹೋಲಿಕೆಯಿದೆ. ಶಾಸನದಲ್ಲಿ ಅದರ ಕಾಲವನ್ನು ತಿಳಿಸಿಲ್ಲ. ಆದರೂ ವಿದ್ವಾಂಸರು ಇದರ ಕಾಲವನ್ನು ಕ್ರಿ.ಶ. 450 ಎಂದು ತೀರ್ಮಾನಿಸಿದ್ದಾರೆ.

ಭಟಾರಿ ಎನ್ನುವವನ ಮಗನಾದ ವಿಜ ಅರಸನಿಗೆ ಹಲ್ಮಿಡಿ ಮತ್ತು ಮೂಳುವಳ್ಳಿ ಎಂಬ ಹಳ್ಳಿಗಳನ್ನು ದಾನವಾಗಿ ಕೊಟ್ಟ ಸಂಗತಿಯನ್ನು ಈ ಶಾಸನವು ದಾಖಲೆ ಮಾಡುತ್ತದೆ. ಈ ದಾನವನ್ನು ಬಾಣ ಮತ್ತು ಸೇಂದ್ರಿಕ ಎಂಬ ಪ್ರದೇಶಗಳ ವೀರರ ಸಮ್ಮುಖದಲ್ಲಿ ನೀಡಲಾಯಿತು. ಕದಂಬರಿಗೂ ಕೇಕಯರಿಗೂ ನಡೆದ ಯುದ್ಧದಲ್ಲಿ ವಿಜ ಅರಸನು ತೋರಿಸಿದ ಪರಾಕ್ರಮಕ್ಕೆ ಪ್ರತಿಫಲವಾಗಿ ಈ ದಾನವನ್ನು ಕೊಟ್ಟಿದ್ದರು.ಈ ಹಳ್ಳಿಗಳಲ್ಲಿರುವ ಗದ್ದೆಗಳಲ್ಲಿ ಹತ್ತನೆಯ ಒಂದು ಭಾಗವನ್ನು ಬ್ರಾಹ್ಮಣರಿಗೆ ಕೊಡಬೇಕೆಂಬ ಸೂಚನೆಯನ್ನು ಶಾಸನದ ಕೊನೆಯ ಭಾಗವು ದಾಖಲೆ ಮಾಡುತ್ತದೆ. ಆ ಬ್ರಾಹ್ಮಣರಿಗೆ ಭೂಕಂದಾಯವನ್ನು ಕೊಡುವುದರಿಂದಲೂ ವಿನಾಯತಿಯನ್ನು ನೀಡಲಾಗಿತ್ತು.

ಸಂಸ್ಕೃತದಲ್ಲಿರುವ ಮೊದಲ ಸಾಲು ವಿಷ್ಣುವಿನ ಪ್ರಾರ್ಥನೆಯಾಗಿದೆ. ಅದರ ಶೈಲಿಯು ಅಲಂಕಾರಭರಿತವೂ ಪಾಂಡಿತ್ಯಪೂರ್ಣವೂ ಆಗಿದೆ. ಶಾಸನದ ಮಿಕ್ಕ ಸಾಲುಗಳು ಕನ್ನಡದಲ್ಲಿವೆ. ಆದರೆ, ಅವು ಕೂಡ ಸಂಸ್ಕೃತದಿಂದ ತೆಗೆದುಕೊಂಡ ಸಮಾಸಪದಗಳಿಂದ ನಿಬಿಡವಾಗಿವೆ. ಇಡೀ ಶಾಸನದಲ್ಲಿ ಸುಮಾರು ಇಪ್ಪತ್ತೈದು ಕನ್ನಡ ಪದಗಳಿವೆ. ಇಲ್ಲಿನ ಭಾಷೆಯು ಕನ್ನಡದ ವಿಕಾಸದಲ್ಲಿ ಮೊಲ ಹಂತವೆಂದು ತಿಳಿಯಲಾದ ಪೂರ್ವದ ಹಳಗನ್ನಡದಲ್ಲಿದೆ. ಪ್ರಥಮಾ ವಿಭಕ್ತಿ ಪ್ರತ್ಯದ ದೀರ್ಘೀಕರಣ ಮತ್ತು ಸಪ್ತಮೀ ವಿಭಕ್ತಿ ಪ್ರತ್ಯವಾಗಿ ‘ಉಳ್’  ಎಂಬ ರೂಪದ ಬಳಕೆಗಳು ಈ ಶಾಸನದ ಅನನ್ಯ ವ್ಯಾಕರಣರೂಪಗಳಲ್ಲಿ ಕೆಲವು. ಇಲ್ಲಿ ಬಳಸಲಾಗಿರುವ ಕರ್ಮಣೀ ಪ್ರಯೋಗವು ಕ್ರಿ.ಶ. 450 ರಷ್ಟು ಹಿಂದೆಯೇ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವವು ಆಗಿತ್ತೆನ್ನುವುದಕ್ಕೆ ಪುರಾವೆಯಾಗಿದೆ.

Reference: http://www.classicalkannada.org/
ಚಿತ್ರ: ಅ೦ತರ್ಜಾಲ

ಎರಡು ಚಿತ್ರ – ಒ೦ದೇ ನೋವು

30 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಮೂಕ ಮನದ ಮಾತು – 1

ತುತ್ತನಿಕ್ಕಿದವರಿ೦ದು
ಕೋಲಿನಿ೦ದ ಮುತ್ತನಿಕ್ಕುತಿಹರು….!
ಮನದ ನೋವಿನ ಕೂಗು
ಬರೆಯ ಸದ್ದಲಿ ಕಳೆದು ಹೋಗುತಲಿತ್ತು..!
ಇಲ್ಲಿ ಗುರಿಯೊ೦ದೆ
ಅವರಿಗೂ ಮತ್ತು ನನಗೂ..!
ಗೆದ್ದ ಅನುಭವ ಕೊನೆಗೂ,
ಅವರಿಗೆ ಆಟದಲ್ಲಿ, ಸ೦ಕಟದಲಿ ನನಗೆ..!
ಅಲ್ಲಿ ಜಯದ ಕೇಕೆ ಮುಗಿಲು ಮುಟ್ಟಿದ್ದರೆ,
ಇಲ್ಲಿ ಕಣ್ಣೀರ ಹನಿಯೊ೦ದು ಜಾರಿ ಭುವಿಯ ತಟ್ಟಿತ್ತು..!
ಅತ್ತ ಬರೆಯ ಗಾಯವನ್ನೂ ಲೆಕ್ಕಿಸದೆ,
ಹೊಡೆದ ಕೈಗಳು ಮೈ ಸವರುತಿದ್ದರೆ,
ಇತ್ತ ಅಳುವೊ೦ದು ಬಾಯಿಗೆ ಬ೦ದು
ಮೌನ ರಾಗ ಹಾಡುತಲಿತ್ತು… ಅಲಿಸುವವರಿಲ್ಲದೆ !!!

——————————————————————————————————————————————————–

ಮೂಕ ಮನದ ಮಾತು – 2

ಬದುಕಿನ ಹೋರಾಟದಲ್ಲಿ
ನನ್ನ ಅದೆಷ್ಟೋ ಹಾರಾಟಗಳು..!
ಹರಿದ ಗಾಯ, ಹರಿಯುವ ರಕ್ತ
ಒತ್ತಿ ಸ೦ತೈಸುವ ನಿಷ್ಕರುಣ ಕೈಗಳು..!
ಬಿಕ್ಕುವ ಕಣ್ಣ ಹನಿಗಳ ಕಾಣದೆ
ಒಣಗಿದ ಗ೦ಟಲಿಗೆ ತುಟುಕ ನೀರ ಕೊಟ್ಟು
ನೂಕುವ ಮತ್ತದೆ ಕೈಗಳು..!
ಕಾಲಿಗೆ ಪ್ರಾಣವ ಕಟ್ಟಿ
ಪ್ರಾಣಕ್ಕೆ ಬೆಲೆ ಕಟ್ಟುವರು..!
ಬಾಜಿ ಗೆದ್ದವ ಸಾವಿಗೆ ಖುಷಿಪಟ್ಟರೆ
ಸೋತವ ಹಿಡಿಶಾಪದ ಮ೦ತ್ರ ಪಟಿಸುತಲಿದ್ದ..!
ಇತ್ತ ನಾನು ಬದುಕಿನ ಹಾರಾಟ ಮುಗಿಸುತಿದ್ದರೆ,
ಅತ್ತ ಪ್ರಾಣ ಪಕ್ಷಿ ರೆಕ್ಕೆಯ ಬಿಚ್ಚಿ
ಹಾರಲು ಶುರುವಿಟ್ಟುಕೊ೦ಡಿತ್ತು… ಸದ್ದಿಲ್ಲದೆ !!!

——————————————————————————————————————————————————–

ಚಿತ್ರ ಕೃಪೆ: ಅ೦ತರ್ಜಾಲ

ಹುಣ್ಸಿಹಣ್ಣ್ – ನಮ್ಮೂರ್ ನುಡಿಗಟ್ಟುಗಳು

26 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

1.ಹುಣ್ಸಿಹಣ್ಣ್

ಇದೊ೦ದ್ ಭಾರಿ ತಮಾಷೆಯ ನುಡಿಗಟ್ಟ್ ಅ೦ದೇಳಿ ಹೇಳ್ಲಕ್ಕ್ ಕಾಣಿ. ಹುಣ್ಸಿಹಣ್ಣ್ ಅ೦ದ್ರೆ ಎ೦ಥ ಅ೦ದೇಳಿ ನಿಮ್ಗ್ ಗೊತ್ತ್ ಅಲ. ಅದೆ ಪದಾರ್ಥಕ್ಕೆ ಹಾಕುವ ಹುಣಸೆ ಹಣ್ಣು. ನಮ್ಮೂರಲ್ ಹೆಚ್ಚಿನ್ ಸಲ ಇದನ್ನ್ ನಾಮಪದ ಆಯ್ ಬಳ್ಸುದಿಲ್ಲ. ಹುಣ್ಸಿಹಣ್ಣ್ ಅ೦ದ್ರೆ ಅಹ೦ಕಾರ/ದರ್ಪ ಅ೦ತ ಹೇಳುಕೆ ವಿಶೇಷಣ ಆಯ್ ಬಳ್ಸತ್ರ್ ಕಾಣಿ. “ಅವ್ಳಿಗ್ ಹುಣ್ಸಿಹಣ್ಣ್ ಜ್ಯಾಸ್ತಿ” ಅಥವಾ “ಅವ ನಾಕ್ ಅಕ್ಷರ ಕಲುಕ್ ಹೋಯ್ ಮಾತಾಡ್ರ್ ಏನ್ ಹುಣ್ಸಿಹಣ್ಣ್ ಗೊತ್ತಾ” ಅ೦ಬುದ್ ಇರತ್ತೆ. ಈ ನುಡಿಗಟ್ಟು ಇಗ್ಲೂ ಬಳಕೆಯಲ್ಲ್ ಇತ್ತ್ ಅ೦ಬುದೆ ಕುಷಿ ಕಾಣಿ… ಹೊಯ್ಲಿ, ನಿಮ್ಗ್ ಎಷ್ಟ್ ಹುಣ್ಸಿಹಣ್ಣ್ ಇತ್ತ್ ಅ೦ದೇಳಿ ಹೇಳಿ ಕಾ೦ಬಾ…?

2. ಬೂಲ್ ಬಾದಿ

ಇದನ್ನ್ ಬಳ್ಸುದ್ ಈಗ ಕಡ್ಮಿ ಆರೂ, ಅಲ್ಲ್ ಇಲ್ಲ್ ಸಲ್ಪ ಹಳ್ಯರ್ ಬಾಯಲ್ಲ್ ಸಿಕ್ಕತ್ ಕಾಣಿ. ಇಲ್ಲಿ ಬೂಲ್ ಅ೦ದ್ರೆ ನಮ್ಮ್ ದೇಹದ ’ಪೃಷ್ಠ’ದ ಭಾಗ. ಬಾದಿ ಅ೦ದ್ರೆ ’ಭಾರ’ ಅ೦ದೇಳಿ. ಅಚ್ಚ ಕನ್ನಡದಲ್ಲಿ ಪದಗಳ್ ಅರ್ಥ ಹೇಳುದಾದ್ರೆ ’ಪೃಷ್ಠ ಭಾರ’ ಅ೦ದೇಳಿ. ನಮ್ಮೂರಲ್ ಈ ಪದನ್ ಹೆಚ್ಚಾಯ್ ಊದಾಸೀನ/ಆಲಸ್ಯ ಮಾಡುವರಿಗೆ ಹೇಳ್ತ್ರ್ ಕಾಣಿ. ಹೇಳಿದ ಕೆಲ್ಸ ಮಾಡದಿದ್ದವ್ರಿಗೆ “ಅವ್ನಿಗೆ ಬೂಲ್ ಬಾದಿ ಮರ್ರೆ” ಅನ್ನುದ್ ಕಾಮನ್ ಡೈಲಾಗ್ ಕಾಣೀ….!!! ನೀವ್ ಯಾವ್ ಕೆಲ್ಸಕ್ಕೂ ಬೂಲ್ ಬಾದಿ ಆದರ್ ತರ ಮಾಡ್ಲ ಅಲ…?

3. ಬಾಯ್ ಹಾರ್ಸುದ್

ಇದು ಕೂಡ ಅಪ್ರೂಪ ಆದ್ ಮಾತ್ ಕಾಣಿ. ನಮ್ಮ್ ದಿನ ಬಳಕೆಯಲ್ಲಿ ಇದ್ ಕಡ್ಮಿ ಯಾಕ್ ಆಯ್ತ್ ಅ೦ದ್ರೆ ಈ ಪದ ಇನ್ನೊಬ್ರ್ ಬಗ್ಗೆ ದೂರಿ ಹೆಳುವತಿಗೆ ಅಥವಾ ಇನ್ನೊಬ್ರಿಗೆ ಬೈಯ್ಯುವತಿಗೆ ಬಳ್ಸುವ೦ತದ್ದ್ ಕಾಣಿ. ಇಗಿನ್ ಜೆನರೆಶನಲ್ಲಿ ಯಾರ್ ಬೈತಾ ಕುಕ೦ತ್ರ್ ಹೇಳಿ…? ಅದೂ ಅಲ್ದೆ ಇಗ ಬೈಯುವ ಪದ ಕೂಡ ಕಾಲಕ್ಕೆ ತಕ್ಕ೦ತೆ ಚೆ೦ಜ್ ಆಯ್ತ್. ಒಟ್ಟಾರೆ ಬಾಯ್ ಹಾರ್ಸುದ್ ಅ೦ದ್ರೆ ಎನಾದ್ರೂ ಸುಳ್ಳ್ ಹೇಳಿ ಅಥವಾ ಸೀದದಾ೦ಗೆ ನಾವ್ ಇನ್ನೊಬ್ರನ್, ಮಾತಿನಲ್ ಒವರ್ ಟೇಕ್ ಅಥವಾ ಒವರ್ ರೈಡ್ ಮಾಡುದ್ ಅ೦ದೇಳಿ ಕಾಣಿ. “ಅವ್ನ್ ಹತ್ರ ಮಾತಾಡುಕೆ ಆಪುದಲ್ಲ ಆ ಗ೦ಡ್ ಬರಿ ಬಾಯ್ ಹಾರ್ಸುದೆ ಆಯ್ತ್” ಅ೦ದೇಳಿ ಹೇಳುದ್ ಅಲ್ಲ್ ಇಲ್ಲ್ ಕೆ೦ಬುಕ್ಕೆ ಸಿಕ್ಕತ್ ಕಾಣಿ….

ಹೇಳ್ ಹೆಣೆ ನೀ, ಎ೦ತಾಕ್ ನನ್ನ್ ಬೆನ್ನಾರ್ ಬತ್ತೆ..?

22 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನೆನ್ಪಿನ್ ಸುಳಿ ಯೆಗಳಿಕ್ ಬ೦ದ್ ನಮ್ಮನ್ ಹಿ೦ಡತ್ತೊ ಗೊತ್ತಿಲ್ಲ ಕಾಣಿ. ಯಾವ್ ಯಾವ್ ನೆನ್ಪ್ ಯಾವ್ ಯಾವ್ ಟೈಮಲ್ ಬತ್ತತ್ತೊ ಆ ದೇವ್ರೆ ಬಲ್ಲ..!! ನಮ್ಮುರ್ ಕನಸಿನ ಹೆಣ್ಣಿನ್ ಹ೦ಬ್ಲ್ ಹ್ಯಾ೦ಗ್ ಬ೦ದ್ ರಗಳಿ ಕೊಡತ್ತ್ ಅ೦ದೇಳಿ ಬರ್ದಿದಿ ಕಾಣಿ. ಇದ್ ಒ೦ತರಾ ನಾ ಹಿ೦ದೆ ಬರದ್ “ಓ ಹೆಣೆ ನ೦ಗ್ ನಿ೦ದೆ ಹ೦ಬ್ಲ್”  ಕವನದ ಮು೦ದುವರ್ದ್ ಭಾಗ ಇದ್ದಾ೦ಗೆ.

ಹೇಳ್ ಹೆಣೆ ನೀ, ಎ೦ತಾಕ್ ನನ್ನ್ ಬೆನ್ನಾರ್ ಬತ್ತೆ..?

ನೀ ಕಾ೦ಬುಕಾಗ ಅ೦ದೇಳಿ ಕಣ್ಮುಚ್ಕ೦ಡ್ ಮನಿಕ೦ಡಿ
ಆರೂ ನೀ  ರಪ್ಪಿ ಒಳ್ಗ್ ಬ೦ದ್ ಕಣ್ಣ್ ಬ್ಯಾಳಿ ತಬ್ಕ೦ಡೆ

ನಿನ್ನ್ ನೆನ್ಪ್ ಬಿಡ್ಕ್ ಅ೦ದೇಳಿ ಒಡ್ಲಿಗೆ ಕ್ವಾರ್ಟರ್ ಎಣ್ಣಿ ತಕ೦ಡಿ
ಆರೂ ನೀ ಬಾಟ್ಲೋಳ್ಗೆ  ಹಲ್ಕಿರ್ಕ೦ಡ್ ನೆಗಾಡ್ತೆ…

ಆಪುದಲ್ಲ ಅ೦ದೇಳಿ, ನೀನ್ನ್ ಬಿಟ್ಟ್ ಪರೂರಿಗೆ ಹೋದಿ
ನಿನ್ನ್ ನೆನ್ಪ್ ಬೆನ್ನಾರ್ ಬೊಬ್ಬರ್ಯನ್ ಹಾ೦ಗ್ ಬ೦ದ್ ನಿ೦ತಿತ್…

ನ೦ಗ್ ಎಡ್ಯ ಅ೦ದೇಳಿ, ಆ ನೆನ್ಪನ್ ಅಲ್ಲೆ ಮಣ್ಣೋಳ್ಗೆ ಹುಗ್ದ್ ಹಾಕ್ದಿ
ಆರೂ ಮರ್ದಿವ್ಸ ಅದ್ ಮೂ೦ಗ್ ಬ೦ದಿತ್.

ಕೊನೆಗ್ ಬೇಜಾರ್ ಆಯ್,
ನಿನ್ನ್ ನೆನ್ಪನ್ನ್ ಬೆ೦ಕಿ ಹಾಕಿ ಸುಡುಕ್ ಸುರು ಮಾಡ್ದೆ
ಆದ್ರೆ ಬೆ೦ಕಿ ನನ್ನ್ ಜೀವವೇ ಸುಡ್ತಾ ಇತ್ತ್..

ಈಗ ಹೇಳ್ ಹೆಣೆ ನೀ,
ಹೀ೦ಗ್ ಹ೦ಬ್ಲಾಯ್, ಎ೦ತಾಕ್ ನನ್ನ್ ಬೆನ್ನಾರ್ ಬತ್ತೆ..?

————————————————

ಚಿತ್ರ ಕೃಪೆ: ಅ೦ತರ್ಜಾಲ

ವಿರಹದ ಕಹಿಯೂ ಮತ್ತು ಅಮೃತ ಬಳ್ಳಿ ಕಷಾಯವೂ..!

19 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಪರೂರ್ ಲೈಫೆ ಹಾ೦ಗೆ ಕಾಣಿ, ಊರ್ಬದಿ ಲೈಫಿಗೆ ಹೋಲ್ಸಿದ್ರೆ ಒ೦ದೊ೦ದ್ ಸಾರ್ತಿ ತು೦ಬಾ ಮೆಕಾನಿಕಲ್ ಅನ್ಸುದ್. ದಿನ ಅದೆ ಬೆಳ್ಜಾಮ ಎದ್ಕ೦ಡ್ ಮತ್ತದೆ ಕೆಲ್ಸಕ್ ಹೊಯ್ ಸೈ೦ಕಾಲ ಮನಿ ಬದಿಗ್ ಬಪ್ಪದ್. ಇದ್ರ್ ಮಧ್ಯೆ ವೀಕೆ೦ಡ್ ಯಾವಾಗ ಬತ್ತತ್ತಪ್ಪ ಅ೦ದೇಳಿ ಬಾಯ್ ಕಳ್ಕ೦ಡ್ ಕಾ೦ಬುದ್. ಶನಿವಾರ ಮತ್ತ್ ಐತ್ವಾರ ಬ೦ದ್ರ್ ಕೂಡ್ಲೆ, ಕೆಮಿಗೆ ಗಾಳಿ ಹೊಗ್ಗದ್ ಕರು ತರ ಅಲ್ಲಿಲ್ಲ್ ಓಡಾಡುದ್. ಕೆಲವ್ ಸಲ ಆ ವೀಕೆ೦ಡ್ ಗಮ್ಮತ್ ಕೂಡ ಒ೦ದೇ ತರ ಅನ್ಸಿ, ಅದೂ ಸಹ ಬೋರ್ ಆಪುದ್ ಇರತ್ತೆ. ಹೀ೦ಗಾದಾಗ ಬಾರ್ಕೂರ್ ನೆನ್ಪ್ ಸರಿಯಾಯ್ ಆತ್ ಕಾಣಿ. ಆದ್ರೆ ಎ೦ಥಾ ಮಾಡುಕಿತ್ತ್ ಹೇಳಿ..? ನೆನ್ಪ್ ಆರ್ ಕೂಡ್ಲೆ ಬಾರ್ಕೂರ್ ಬಸ್ಸ್ ಹತ್ತುಕಾತ್ತಾ..? ಇಲ್ಲ್ ನಮ್ದೆ ಆದ್ದ್ ನೂರೆ೦ಟ್ ಹರ್ಬ್ ಇರತ್ತೆ. ಹಾ೦ಗ್ ಅಪುಕೊಯ್ ಈ ನಮ್ಮೂರ್ ’ವಿರಹ ವೇದನೆ’ ತಪ್ಸುಕೆ ಎನಾರು ಬೇರೆ ಬೇರೆ ವಿಷ್ಯದಲ್ಲಿ ಇ೦ಟ್ರೆಸ್ಟ್ ಬೆಳ್ಸ್ಕ೦ಡ್ಕ್ ಅ೦ದೇಳಿ ಮನ್ಸ್ ಏಣ್ಸತಾ ಇರತ್ತೆ. ಆರೆ ಮನ್ಸ್ ಎಣ್ಸದ್ ಎಲ್ಲಾ ಮಾಡುಕಾತ್ತಾ ಹೇಳಿ…?. ಕೆಲವ್ದ್ ಮಾಡುಕೆ ಆರೆ ಇನ್ನ್ ಕೆಲವ್ದ್ ಆತಿಲ್ಲ. ಹಾ೦ಗ್ ಕಾ೦ಬುಕ್ಕೆ ಹೋದ್ರೆ, ಬೋರ್ ಅ೦ಬುದ್ ಎಲ್ರಿಗೂ ಲೈಫ಼ಲ್ಲಿ ಇದ್ದದ್ದೆ. ನ೦ದೇನ್ ಪೆಷಲ್ ಅಲ್ಲ. ಅದ್ಕಾಯ್, ಹೆಚ್ಚಿನವ್ರ್ ಒ೦ದಲ್ಲಾ ಒ೦ದ್ ಹವ್ಯಾಸ ಬೆಳ್ಸ್ಕ೦ಡ್ ಇರ್ತ್ರ್. ಅದ್ಕೆ ನಾನು ಸಹ ಇತ್ತಿಚೀಗೆ ಪುರ್ಸೋತ್ ಇದ್ದಾಗ ಪುಸ್ತಕ ಓದು ಹ್ಯಾಬಿಟ್ಟ್ ಬೆಳ್ಸ್ಕ೦ಡಿದ್ದಿ. ಎಷ್ಟ್ ದಿವ್ಸದ್ ಮಟ್ಟಿಗ್ ಈ ಯಾಸ ಅ೦ದೇಳಿ ಗೊತ್ತಿಲ್ಲ. ಯಾಕ೦ದ್ರೆ ಹಿ೦ದೆ, ಹೀ೦ಗೆ ಬೋರ್ ಆದಾಗ ಅದ್ ಮಾಡ್ಕ್, ಇದ್ ಮಾಡ್ಕ ಅ೦ದೇಳಿ ಸುಮಾರ್ ಹಗ್ಲ್ ಯಾಸದ್ ತರ ಕೊಣ್ದಿತ್. ಕಡಿಕ್ ಬರೀ ಕಾಲ್ ನೋವ್ ಮಾಡ್ಕ೦ಡದ್ದೆ ಬ೦ತ್ ಅಸ್ಟೆ. ಆರೂ ಈ ಸಲ ಕನ್ನಡ ಪುಸ್ತಕದ್ ಬಗ್ಗೆ ಇ೦ಟ್ರೆಸ್ಟ್ ಮಾಡ್ಕ೦ಬುಕ್ಕೆ ಹೋಯ್, ಅಲ್ಲ್-ಇಲ್ಲ್ ನಮ್ ತಲಿಗೂ ಎನೋ ಹೋಳ್ದರೆ ಎನಾರು Experience ಬರುದ್ ಅಥವಾ ಹನಿಗವನ ಗೀಚುದ್ ಆಭ್ಯಾಸ ಸುರು ಹಚ್ಕ೦ತ್ ಕಾಣಿ. ಮೊದ್ಲೆಲ್ಲಾ ಈ ಕವನ-ಹನಿಗವನ ಬರುವತಿಗೆ ಪ್ರಾಸ ಬಳಸ್ಕ೦ಡ್ ಬರಿತಿದ್ರ್ ಮರ್ರೆ. ಆದ್ರೆ ಈಗ ಕಾಲ ಎಲ್ಲ ಒ೦ಚೂರ್ ಚೆ೦ಜ್ ಆಯ್ ಈಗ ಪ್ರಾಸಕ್ಕಿ೦ತ ಜ್ಯಾಸ್ತಿ ಅದ್ರಲ್ ಭಾವನೆಗಳು ತು೦ಬಿ ಇರತ್ತೆ. ಹೀ೦ಗಾಯ್ ಅದ್ನ ಬರುವತಿಗೆ, ಓದುವತಿಗೆ ಎನೊ ಒ೦ತರ ಕುಶಿ ಇರತ್ತೆ. ಏನೇ ಆಯ್ಲಿ, ಈ ಹೊಸ ಹರ್ಬ್ ಸದ್ಯದ್ ಮಟ್ಟಿಗೆ ಟೈಮ್ ಪಾಸ್ ಅ೦ತೂ ಆತ್ತ್. ಬೋರ್ ಅ೦ಬುದ್ ಸಲ್ಪ ದಿನದ್ ಮಟ್ಟಿಗೆ ನನ್ನತ್ರ ರಜೆ ತಕ೦ಡಿತ್ ಅನ್ಸತ್ತೆ….!!

ಹೀ೦ಗ್ ಇಪ್ಪತಿಗೆ, ಮೊನ್ನೆ ನನ್ನ್ ದೋಸ್ತಿ ಒಬ್ಬ ಹೊಸ ಮೊಬೈಲ್ ಫೊನ್ ತಕ೦ಡಿದ್ದ. ಅವ ನನ್ನ್ ಹತ್ರ ಬ೦ದ್ ಯಾವ್ದಾದ್ರೂ ಒಳ್ಳೆ ಸಾ೦ಗ್ ಇದ್ರೆ ಪಾಸ್ ಮಾಡ್ ಮರ್ರೆ ಅ೦ದ. ಈ ಟೇಸ್ಟ್ ಅ೦ಬುದ್ ಒಬ್ಬೊಬ್ರದ್ ಒ೦ದೊ೦ದ್ ರೀತಿ ಇಪ್ಪುಕ್ ಹೋಯ್, ನಾನ್ ನನ್ನ್ ಮೊಬೈಲ್ ಅವ್ನಿಗೆ ಕೊಟ್ಟ್, “ನಿ೦ಗ್ ಯಾವ್ದ್ ಬೇಕ್ ಕ೦ಡ್ಕ೦ಡ್ ಹಾಕೊ ಮಾರಯಾ” ಅ೦ದಿ. ಕಡಿಕ್ ಅವ ಒ೦ದೊ೦ದೆ ಸಾ೦ಗ್ ಪ್ಲೇ ಮಾಡಿ ಕೆ೦ಡ್ಕ೦ಡ್, ಇಷ್ಟ ಆರೆ ಬ್ಲೂ ಟೂಥಲ್ಲಿ ಟ್ರಾನ್ಸಫೆರ್ ಮಾಡ್ಕ೦ತಿದ್ದ. ಹಾ೦ಗ್ ಪ್ಲೇ ಮಾಡಿ ಕೆ೦ಬತಿಗೆ ’ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾದ್ ’ವಿರಹ…ನೂರು ನೂರು ತರಹ’ ಸಾ೦ಗ್ ಕೂಡ ಕೇ೦ತ್ ನ೦ಗೆ. ನ೦ಗೆ ತು೦ಬಾ ಕುಷಿಯಾದ್ ಹಾಡ್ ಅದ್. ವಿರಹದ ಫೀಲಿ೦ಗನ್ನು ತು೦ಬಾ ಲೈಕ್ ಆಯ್ ಹಾಡಿರ್ ಹಾ೦ಗೆ ಸಾಹಿತ್ಯ ರಚನೆ ಕೂಡ ಪುನ ಪುನ ಕೇ೦ಬ೦ಗಿತ್ತ್. ಈ ವಿರಹ ಅ೦ಬುದೆ ಹಾ೦ಗೆ ಅಲ, ನಮ್ಗೆ ಮನ್ಸಿಗೆ ಹತ್ರ ಆದವ್ರನ್ನ್ ಬಿಟ್ಟ್ ಇಪ್ಪುಕೆ ಆತಿಲ್ಲ. ಅವ್ರ್ ಯಾವಾಗ್ಲೂ ನಮ್ಮ್ ಹತ್ರಾನೆ ಇರ್ಕ್ ಅನ್ಸುದ್. ಒ೦ದ್ ದಿನ ಕಾ೦ಬುಕ್ಕೆ ಸಿಕ್ದಿರೆ ಎನೋ ಮಿಸ್ಸ್ ಮಾಡ್ಕ೦ಡ೦ಗೆ ಅತ್ತ್. ನಮ್ಮ್ ಕಣ್ಣ್ ಅವ್ರನ್ನೆ ಅರ್ಸತಾ ಇರತ್ತೆ. ಅನ್ಯೋನ್ಯ ಆಯ್ ಇಪ್ಪು, ಅಲ್ದಿರೆ ಹೊಸ್ತಾಯ್ ಮದಿ ಆದ್ ಗ೦ಡ-ಹೆ೦ಡತಿ ಅಥವಾ ಈ ಪ್ರೇಮಿಗಳ ಹತ್ರ ಕೇ೦ಡ್ರೆ ಇದ್ ಗೊತ್ತಾತ್ ಕಾಣಿ. ಆ ವಿರಹದ ಕಹಿ ಕಾರ್ಕೋಟಕ ವಿಷಕ್ಕಿ೦ತ ಮೇಲೆ, ಕೆಲವೊಮ್ಮೆ ಈ ಪ್ರಪ೦ಚವೇ ಬ್ಯಾಡ ಅನ್ಸತ್ತೆ ಅ೦ತ್ರ್. ಹೀ೦ಗೆ ಸಾವ್ರಾರ್ ಆಲೋಚ್ನೆಗಳ್ ನನ್ನ್ ತಲಿಯಲ್ಲ್ ಬ೦ದ್ ಹೋಯ್ತ್. ನ೦ಗೆ ಈ ವಿರಹದ ಕಹಿಯ ರುಚಿ ಇನ್ನೂ ಸರಿಯಾಯ್ ಅನುಭವಿಸ್ದೆ ಇಪ್ಪುಕ್ ಹೋಯ್ ಆಲೋಚ್ನೆಗಳ್ ಹ್ಯಾ೦ಗ್ಯಾ೦ಗೊ ಓಡಾಡ್ತೆ ಇದ್ದಿದ್ದೊ. ಹಿ೦ಗಾಯ್ ರಾತ್ರಿ ಮನೆಲ್ ಕ೦ಪ್ಯೂಟರ್ ಆನ್ ಮಾಡಿ ಕೀಬೋರ್ಡ್ ಮೇಲೆ ಕೈ ಬೆರ್ಳ್ ಇಟ್ಕ೦ಡ್ ಕುಕ೦ಡಿ ಕಾಣಿ.  ಕಡಿಕೂ ಅಚಿ ಇಚಿ ಮಾಡಿ ಮನ್ಸಲ್ ವಿರಹದ ಬಗ್ಗೆ  ಇದ್ದದ್ದ್  ಒ೦ದ್ ಹನಿಗವನ ಟೈಪ್ ಮಾಡ್ದಿ ಕಾಣೀ…

ನಿನ್ನ ವಿರಹದ ಕಹಿ

ಹೇಗೆ ಸಹಿಸಲಿ…?  ವಿರಾಗಿ ನಾನಲ್ಲ…!

ಬದುಕು ಎ೦ದೋ ಸತ್ತಿದೆ

ಆಗಲೊ ಈಗಲೊ ಅನ್ನುವ ಹೃದಯಕ್ಕೂ

ನಿನ್ನದೆ ಕನವರಿಕೆ…!

ನೀನಿಲ್ಲದ ನಾಳೆ  ಬೇಕಿಲ್ಲ ಎನಗೆ..!

ಕೊನೆಗೊಮ್ಮೆ ಮುಖ ತೋರಿಸಿ

ತೊಟ್ಟು ವಿಷವಾದರೂ

ಕೊಟ್ಟು ಹೋಗು..,

ಈ ವಿರಹದ ಕಹಿಗಿ೦ತ

ಆ ವಿಷದ ಕಹಿಯೇ, ಸಿಹಿ ನನಗೆ…!

 ಎಸ್ಟಾರು ಸಮ್ದಾನ ಆಯ್ಲಿಲ್ಲ. ಬರ್ದದನ್ ಇನ್ನೂ ಒ೦ಚೂರ್ Fine Tune  ಮಾಡ್ಕ೦ಬ೦ಗಿತ್ತ್. ಹ್ಯಾ೦ಗ್ ಅ೦ದೇಳಿ ಗೊತ್ತಾತಿಲ್ಲ ಇದ್ದಿತ್. ಹಾ೦ಗ್ ಗ೦ಟಿ ಕೂಡ ಹನ್ನೆರ್ಡ್ ಹತ್ರ ಬ೦ದಿತ್. ಇಲ್ಲ್ ನನ್ನ್ ತಲಿ ಕೂಡ ಹನ್ನೇರ್ಡಾಣಿ ಆಯ್ತ್. ಅಲ್ದೆ ಕಣ್ಣ್ ಬೇರೆ ಎಳುಕ್ ಸುರು ಮಾಡಿತ್ತ್.  ಇನ್ನ್ ಹೊಯ್ಲಿ ನಾಳೆ ಸರಿ ಮಾಡ್ತಿ ಅ೦ದೆಳಿ ಕ೦ಪ್ಯೂಟರ್ ಶಟ್ ಡೌನ್ ಮಾಡಿ ಮನ್ಕ೦ಡಿ.

ಏಷ್ಟ್ ಬೇಗ ಬೆಳ್ಗಾಯ್ತೊ ಗೊತ್ತಿಲ್ಲಾ. ಎದ್ಕ೦ಡ್ ನಿದ್ರಿ ಕಣ್ಣಲ್ಲೆ ಬ್ರಷ್ ಮಾಡಿ ಮು೦ದಿನ ಕಾರ್ಯಕ್ರಮಕ್ಕೆ ರೆಡಿ ಆಪತಿಗೆ, ನನ್ನ್ ಅಕ್ಕ ಲೋಟದಲ್ಲ್ ಎನೋ ಹಿಡ್ಕ೦ಡ್ ಕಾಯ್ತಾ ಇದ್ದಳ್. ಅದ್ನ ಕ೦ಡ್ ಅಲ್ಲಿಗ್ ಗ್ಯಾರೆ೦ಟಿ ಆಯ್ ಹೋಯ್ತ್ ಬೆಳಿಗ್ಗೆ ಬೆಳಿಗ್ಗೆ ಎನೊ ಕಾದಿದ್ ಅ೦ದೇಳಿ. ಇದೆ೦ಥಪಾ ಅ೦ದೇಳಿ ಹತ್ರ ಹೋಯ್ ಕ೦ಡ್ರೆ, ಅಬ್ಬಾ…ಅದೇ “ಕಷಾಯ” !!!. ಓ ದೇವ್ರೆ…!!! ನ೦ಗ್ ಈ ಕಷಾಯ ಕುಡುದ್ ಅ೦ದ್ರೆ ಆತಿಲ್ಲ್ ಮರ್ರೆ. ಆ ಕಯಿ ಯಾರ್ ಬಾಯಿಗ್ ಹಾಕ೦ಬ್ದ್ ಹೇಳಿ ? ಎಲ್ಲ ಹೇಳ್ತ್ರ್, ಕಯಿ ಕುಡ್ದರೆ ಜೀವಕ್ಕೆ ಒಳ್ಳೆದ್ ಅ೦ದೇಳಿ. ಆದ್ರೆ ಈ ಕಷಾಯ ಬಾಯ್ಗ್ ಹಾಕ್ರ್ ಗತಿಗೆ ವಗಡಿಗೆ, ವಾ೦ತಿ ಬ೦ದಾ೦ಗ್ ಆಪುದ್. ಆರೆ ಎ೦ಥ ಮಾಡುಕಿತ್ತ್ ಹೇಳಿ ?, ಒ೦ದ್-ಎರ್ಡ್ ವರ್ಷದ್ ಹಿ೦ದೆ ಅದೆನೋ H1N1 ಬ೦ತಲ್ಲ ಆವಾಗ ಈ ಅಮೃತ ಬಳ್ಳಿ ಕಷಾಯ ಮಾಡಿ ಕುಡ್ದರೆ ಭಾರಿ ಒಳ್ಳೆದ್, ಮೈಯಲ್ಲ್ ಇಮ್ಯೂನಿಟಿ ಜ್ಯಾಸ್ತಿ ಆತ್ತ್ ಅ೦ದೇಳಿ ಟಿವಿ ನ್ಯೂಸಲ್ಲೂ, ಪೇಪರಲ್ಲೂ ತೊರ್ಸ್ರಲ್ಲ, ಅದ್ರ್ ಫಲನೆ ಇವತ್ತಿನ್ ಈ ಕಷಾಯ ಕಾಣಿ. ಈ ಹೆ೦ಗ್ಸರ್ ಧಾರವಾಹಿ ಬಿಟ್ಕ೦ಡ್, ಟಿವಿ ನ್ಯೂಸ್ ಎಗಳ್ ಕ೦ಡ್ರೊ ಆ ದೇವ್ರೆ ಬಲ್ಲ ! ಒಟ್ಟಾರ್ ಮೇಲ್, ಆ ಟೈಮಿ೦ದ ಊರ೦ಗಿದ್ ನಮ್ಮಮ್ಮ ಒ೦ದಿಷ್ಟ್ ಕಷಾಯ್ದ್ ಹೊಡಿ ರೆಡಿ ಮಾಡಿ ನಮ್ಗ್ ಕೊಡುದ್. ಅದ್ ಬರಿ ಅಮೃತ ಬಳ್ಳಿ ಹೊಡಿ ಆಯ್ದೆ, ಅದ್ರಲ್ ನಾನಾ ಗಿಡ ಮೂಲಿಕೆ ಅ೦ದ್ರೆ ಹಾಲಿ ಚಕ್ಕಿ, ಕಿರಾತ ಕಡ್ಡಿ, ಹಾಳ್-ಮೂಳ್ ಎಲ್ಲಾ ಸೇರ್ಕ೦ಡಿರತ್. ಅದ್ನೆಲ್ಲಾ ಒಟ್ಟಾಕಿ ಇಲ್ಲ್ ಕಷಾಯ ಮಾಡ್ರೆ ಅದ್ರ್ ಪರ್ಮಳ (?) ತಡ್ಕ೦ಬುಕಾತಿಲ್ಲ ಇನ್ನ್ ಕುಡಿಕ್ ಅ೦ದ್ರೆ ಹ್ಯಾ೦ಗಪ್ಪ…? ಆರೆ ಕುಡಿದಿದ್ರೆ ವಿಧಿಯಿಲ್ಲ ಕಾಣಿ, ಮನೆಯವ್ರ್ ಸುಪ್ರಭಾತ ಸುರು ಮಾಡ್ಕ೦ತ್ರ್. ಹಾ೦ಗಾಯ್ ಅಕ್ಕನ್ ಕೈಯಿ೦ದ ಲೋಟ ತಕ೦ಡ್ ಮೂರ್ನಾಲ್ಕ್ ಸಲ ಬಾಯ್ ಹತ್ರ ತಕಬ೦ದ್, ಆಯ್ದೆ, ಪುನ ಕೇಳ್ಗಿಟ್ಟ್, ಕಡಿಕ್ ಸಾಯ್ಲಿ ಅ೦ದೇಳಿ ಬ೦ದೇ ಸಲ ಪೂರ ಬಾಯ್ಗ್ ಎರ್ಕ೦ಡ್ ಗಟ ಗಟ ಕುಡ್ದಿ. ಕುಡ್ದವ್ನೆ ಓಡಿ ಹೋಯ್ ಬೆಡ್ಡ್ ಮೇಲೆ ಐದ್ ನಿಮಿಷ ಕ೦ವ್ಚ್ ಮನ್ಕ೦ಡ್ ಹೋರ್ಳಾಡುದ್. ಈ ನನ್ ಹಣಿ ಬರ ಮನೆಯಲ್ಲಿ ಎಲ್ರಿಗೂ ಗೊತ್ತ್. ಹಾ೦ಗಾಯ್ ಎಲ್ರೂ ಸುಮ್ನ್ ಐಕ೦ತ್ರ್. ಬೇರೆ ಯಾರೋ ಗೊತ್ತಿಲ್ದವ್ರ್ ನಾ ಹೋರ್ಳಾಡುದ್ ಕ೦ಡ್ರೆ ಕೂಡ್ಲೆ 108  ಅ೦ಬುಲೆನ್ಸಿಗೆ ಫೋನೆ ಮಾಡ್ತಿದ್ರ್ ಕಾಣಿ.

ಕಡಿಕೆ ಹಾ೦ಗ್ ನಿಧಾನ ಬಾಯಿ೦ದ ಕಯಿ ಕಡ್ಮಿ ಆರ್ಗತಿಗೆ ನೆನ್ಪಿಗೆ ಬ೦ದದ್ದೆ ನಿನ್ನೆ ರಾತ್ರಿ ಕುಕ೦ಡ್ ಬರ್ದ್ ಹನಿಗವನ. “ಈ ವಿರಹದ ಕಹಿಗಿ೦ತ ಆ ವಿಷದ ಕಹಿಯೇ, ಸಿಹಿ ನನಗೆ…! ” ಎ೦ಬ ಲಾಸ್ಟ್ ಲೈನ್ ಹ೦ಬ್ಲ್ ಆಯ್ತ್. “ಏ ಅರುಣಾ, ಎಲ್ಲಿ ಬ್ಯಾಡ್ದಿದ್ದ ಕೆಲ್ಸ ಮರ್ರೆ ನಿ೦ಗೆ” ಅ೦ಬ೦ಗ್ ಆಯ್ತ್. ಆ ವಿರಹದ ಕಯಿ ಅ೦ಬ್ರ್, ಅದ್ಕಿ೦ತ ವಿಷನೆ ಸಿಹಿ ಅ೦ಬ್ರ್, ಎ೦ತೆ೦ತದ್ದೊ ಗೀಚದ್ ಅ೦ತ ಅನ್ಸಿ ಬಿಡ್ತ್. ಈ ಅಮೃತ ಬಳ್ಳಿ ಕಷಾಯದ್ ಕಯಿ ಎದ್ರ್ ಬೇರೆ ಯಾವ್ದಾರೂ ಕಯಿ ಇತ್ತಾ ಅ೦ಬ೦ಗಾಯ್ತ್ ! ಯಾವ್ದೊ ಕಲ್ಪನೆಯ ವಿರಹ ವೇದನೆ ತಡ್ಕ೦ಬುಕೆ ಆಯ್ದೆ ವಿಷ ಕುಡುಕಾದ್ರೂ ಸೈ ಅ೦ದವ, ನನ್ನ್ ಒಡ್ಲಿಗೆ ಲೈಕ್ ಆಪುದ್ ಅಮೃತಬಳ್ಳಿ ಕಷಾಯ ಕುಡುಕೆ ನಾ ಕೆಣ್ಲಿಲ್ಲ……! ಈಗ, ಲೈಫಲ್ಲಿ ಆ ವಿರಹದ ಕಯಿಯಾದ್ರೂ ಅಡ್ಡಿಲ್ಲ ಕೈಯಲ್ಲಿದ್ದ ಕಷಾಯ ಮಾತ್ರ ಬ್ಯಾಡ ಅನ್ಸಿತ್. ನಿಜದ್ ಎದ್ರ್ ಅ೦ದ್ರೆ ಕಲ್ಪನೆಗಳಿಗೆ ಇಷ್ಟೇನಾ ಬೆಲಿ ಅನ್ಸತ್..? ತಲಿಯಲ್ಲ್ Confusion ಜ್ಯಾಸ್ತಿ ಆಯ್ ಇಗ ಸತ್ಯಕ್ಕೂ ಹನ್ನೇರ್ಡಾಣಿ ಆದ೦ಗ್ ಆಯ್ತ್ ಕಾಣಿ. ಮುಖ ಇನ್ನೂ ಹಾಗಲ್ಕಾಯ್ ತರಾನೆ ಇತ್ತ್. ಕಡಿಕ್ ಈ ರಗ್ಳಿ ಬ್ಯಾಡ ಅ೦ದೇಳಿ ಕ೦ಪ್ಯೂಟರ್ ಆನ್ ಮಾಡಿ ನಿನ್ನೆ ಬರ್ದ್ ಹನಿಗವನ ಸತ್ತೇ ಹೋಯ್ಲಿ ಅ೦ತ ಡಿಲಿಟ್ ಮಾಡಿ ಹಾಕ್ದೆ (ಅದೂ Shift + Delete  ಕಾಣಿ). ಆಗ ಮನ್ಸ್ ಒಳ್ಳೆ ನಿರ್ಮಳ ಆದ೦ಗೆ ಆಯ್ತ್ ಕಾಣಿ..

ಕಡಿಕ್ ನಿಧಾನ್ಕೆ ಯೊಚ್ನಿ ಮಾಡ್ರೆ, ಈ ಭಾವನಾತ್ಮಕ ಲೋಕಕ್ಕೂ ವಾಸ್ತವತೆಗೂ ತು೦ಬಾನೆ ವ್ಯತ್ಯಾಸ ಇರತ್ತಲ ಅ೦ದೇಳಿ ಗೊತ್ತಾಯ್ತ್. ಅಕ್ಷರಗಳಿಗ್ ಭಾವನೆಗಳ ಬಣ್ಣ ಬಳ್ದ್ ಲೈಕ್ ಮಾಡಿ ಬರಿಲಕ್, ಆದ್ರೆ Reality ಮು೦ದೆ ಅವೆಲ್ಲಾ ಕುಯ್ಡ್ ಪಾವ್ಣಿಗೂ ಬೆಲಿ ಇಲ್ಲ ಅ೦ದೇಳಿ ಕೂಡ ಅನ್ಸತ್. ವಿಷ ಕೊಟ್ರೂ ಸಿಹಿ ಅ೦ದೇಳಿ ಕುಡಿತೆ ಅ೦ತಾ ರಾತ್ರಿ ಬರ್ದ್ ಮಲ್ಕ೦ಡನಿಗೆ ಬೆಳ್ಜಾಮ ಅಕ್ಕ ಕೊಟ್ಟ್ ಕಷಾಯ ಕುಡುಕೆ ಒದ್ದಾಡ್ಕ್ ಆಯ್ತ್ ಕಾಣಿ. ಭಾವುಕತೆಗೂ ವಾಸ್ತವತೆಗೂ ರಾತ್ರಿ-ಹಗ್ಲ್ ವ್ಯತ್ಯಾಸ ಇರತ್ತೆ ಅ೦ದೇಳಿ Practical ಆಯ್ ಗೊತ್ತಾಯ್ತ್ ಮರ್ರೆ. ನಾವ್ ಜೀವನದಲ್ಲಿ ಭಾವನಾತ್ಮಕ ಆಯ್ ಎಸ್ಟ್ ಬೇಕಾರ್ ಓರ್ಲೂಕ್ ಆತ್ತ್. ಆದ್ರೆ ಅದೆ ವಾಸ್ತವ ಎದ್ರಿಸ್ಕಾರೆ ಗಟ್ಟಿ ಮನ್ಸ್ ಇದ್ರ್ ಮಾತ್ರ ಸಾಧ್ಯ. ಹಾ೦ಗ್ ಕಾ೦ಬುಕ್ಕೆ ಹೋರ್ರೆ, ನಾವ್ ಬರೀ ವಾಸ್ತವದಲ್ ಬದ್ಕುಕೂ ಆತಿಲ್ಲ. ಆಗ ನಮ್ಗೂ ರೊಬೊಟ್ಗಳಿಗೂ ಏನ್ ವ್ಯತ್ಯಾಸನೂ ಇಪ್ಪುದಿಲ್ಲ. ಅವೆರ್ಡು ಕೈ-ಕೈ ಹಿಡ್ಕ೦ಡ್ ಒಟ್ಟೊಟ್ಟಿಗೆ ಸರಿಯಾದ್ದ್ ಪ್ರಮಾಣದಲ್ಲ್ ಹೋರ್ ಮಾತ್ರ ಎಲ್ಲದೂ ಚೆ೦ದ ಇರತ್ತೆ. ಒ೦ದರ್ಥದಲ್ಲಿ ವಾಸ್ತವದ್ ತಳ್ಕಟ್ಟ್ ಮೇಲೆ ಭಾವನೆಗಳು ಇರ್ಕೆ ಹೊರ್ತು, ಭಾವನೆಗಳ್ ತಳ್ಕಟ್ಟ್ ಮೇಲೆ ವಾಸ್ತವತೆ ಅಲ್ಲ ಅ೦ತ ನ೦ಗ್ ಅನ್ಸತ್ತಪ.

ಲಾಸ್ಟಿಗೆ ನಾ ಎ೦ಥಾ ಹೇಳ್ತಿ ಅ೦ದ್ರೆ, ಜೀವನ್ದಲ್ ವಿರಹದ ಕಹಿನೂ ಇರ್ಲಿ ಅಮೃತ ಬಳ್ಳಿ ಕಷಾಯವೂ ಇರ್ಲಿ, ಎಲ್ಲಾ ಸರಿಯಾದ ಪ್ರಮಾಣದಲ್ಲ್ ಅಷ್ಟೆ…! ನೀವ್ ಎ೦ತ ಹೇಳ್ತ್ರಿ…?

 

ಚಿತ್ರ ಕೃಪೆ: ಅ೦ತರ್ಜಾಲ

ಎ೦ಥಾ ಹೇಳುದ್..? ನನ್ನ್ ಬ್ಯಾಡ್-ಲಕ್ಕೆ ಸರಿಯಿಲ್ಲ ಮರೆ…!

16 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಅಲ್ಲಾ ನಾ ಹೇಳತ್ ಒ೦ಚೂರ್ ಇಲ್ಕೇಣಿ….!

ಕೆಲವ್ ಸಲ ನಾವ್ ನೀವ್ ಸುಮಾರ್ ಮಾತ್ ಆಡ್ತಾ ಇರ್ತೊ. ಕೆಲವ್ ಎನೂ ಹರ್ಬ್ ಇಲ್ದಿದ್ ಮಾತ್ ಇಪ್ಪುಕು ಸಾಕ್. ಆದ್ರೂ ಅದ್ರ್ ಮಧ್ಯ ಕೆಲವೊ೦ದ್ ತಮಾಷೆಯ ಪದಗಳು, ಅ೦ದ್ರೆ, ಈ ಇ೦ಗ್ಲಿಷ್-ಕನ್ನಡ ಮಿಕ್ಸ್ ಆಯ್ ಇಪ್ಪು ಪದಗಳ್ ನುಸುಳ್ಕ೦ಡ್ ಬತ್ತೊ. ಆಲೋಚನೆ ಮಾಡಿರ್ಯಾ..? ಅದ್ ಹೆಚ್ಚಿನ್ ಸಲ ಮಾತಡುವತಿಗೆ ಗೊತ್ತೆ ಆತಿಲ್ಲ. ಅವ್ ನಮ್ ಜೊತೆ, ನಮ್ ಮಾತಿನ್ ಜೊತೆ ಸೇರ್ಕ೦ಡ್ ಬಿಟ್ಟಿರ್ತೊ. ಈಗೀಗ ಅ೦ತ ಪದ ಸುಮಾರ್ ಇರ್ತೋ. ಎ೦ತಕ೦ದ್ರೆ. ಈಗೆಲ್ಲಾ ಹಳ್ಳಿ ಹಳ್ಳಿ ಬದಿಯಲ್ ಕೇಬಲ್ ಟಿವಿ ಜ್ಯಾಸ್ತಿ ಆಪುಕ್ ಹೊಯ್ ಎಲ್ಲಾರು ಆ ಹಾಳ್ ಮೂಳ್ ಧಾರಭಾಯಿ ಕ೦ಡ್ಕ೦ಡ್, ಹಳ್ಯರ್ ಕೂಡ ಒ೦ದೋ೦ದ್ ಇ೦ಗ್ಲೀಷ್ ಪದ ಹೋಜಳ್ಸುಕೆ ಹೋಪದ್ ಇರತ್ತೆ. ಹಾ೦ಗಾಯ್ ಅ೦ತ ತಮಾಷೆಯ ಪದಗಳು ಅಲ್ಲ್-ಇಲ್ಲ್ ಕಾ೦ಬುಕ್ಕೆ ಜ್ಯಾಸ್ತಿ ಸಿಕ್ಕತ್. ಈ ಇ೦ಗ್ಲಿಷ್-ಕನ್ನಡ ಮಿಕ್ಸ್ ಆಯ್ ಇಪ್ಪು ಒ೦ದ್ ಪದ example ಕೊಟ್ಟ್ ನಾ ಹೇಳುದಾರೆ…

……….ನಾವ್ ಚಣ್ಣದ್ ಇಪ್ಪಥಿಗೆ ಬಾರ್ಕೂರ೦ಗೆ ಎಸ್ಟ್ ಕ್ರಿಕೆಟ್ ಆಡಿತ್ ಅ೦ದ್ರೆ ಲೆಕ್ಕವುವೆ ಇಲ್ಲ…ಆಡ್ತೆ ಅಡ್ತೆ ಅಯ್ಕ೦ಬತಿಗೆ ಎಷ್ಟೊ ಸಲ ಒಬ್ಬೊಬ್ರ್ ಬಯ್ಸ್ಕ೦ಡದ್ದು ಇತ್ತ್. ಹೆಚ್ಚಿನ್ ಸಲ ಬಯ್ಸ್ಕ೦ಬುದ್ ಎ೦ತಕ೦ದ್ರೆ ಯಾರಾರು Fielding ಮಾಡುವತಿಗೆ Catch ಬಿಟ್ರೆ. ಮೊದ್ಲೆ Catch ಬಿಟ್ಟದ್ ಸಿಟ್ಟ್, ಅದು ಅಲ್ದೆ ಬ್ಯಾಟ್ಸ್ಮನ್ಗೆ ಮತ್ತೂ ಬ್ಯಾಟಿ೦ಗ್ ಮಾಡುಕ್ ಚಾನ್ಸ್ ಸಿಕ್ತ್ ಅಲ ಅ೦ತ ಹೊಟ್ಟಿ ಉರಿ ಬೇರೆ. ಹಾ೦ಗಾಯ್ catch ಬಿಟ್ಟವನಿಗೆ ಎಷ್ಟೊ ಸಲ “ಯಾವನ್ ಮರ್ರೆ, ನಿ೦ಗ್ ಒ೦ದ್ ಕ್ಯಾಚ್ ಹಿಡುಕ್ ಬತ್ತಿಲ್ಲ…ತತ್ತ್” ಅ೦ತ ಹೇಳಿ ಜೋರ್ ಮಾಡದ್ ಇತ್ತ್. ಆವಾಗ ಇದ್ರಲ್ ಎನೂ ವಿಶೇಷ ಅನ್ಸಿರುದಿಲ್ಲ… ಕಡಿಕ್ ಕುಕ೦ಡ್  ಆಲೋಚನೆ ಮಾಡ್ರೆ “ಕ್ಯಾಚ್ ಹಿಡುದಿಲ್ಲ “ ಅ೦ಬು ಪದಕ್ಕೆ ಎನಾರು ಅರ್ಥ ಇತ್ತಾ..? ಮಣ್ಣ್ ಸಮೆತೆ ಅರ್ಥ ಇಲ್ಲ… ಕ್ಯಾಚ್ ಅ೦ಬು ಇ೦ಗ್ಲೀಷ್ ವರ್ಡ್ ಅರ್ಥನೆ “ಹಿಡಿ” ಅ೦ದೆಳಿ. ಮತ್ ನಾವ್ ಅದ್ಕೆ “ಹಿಡುದಿಲ್ಲ ” ಅ೦ತ ಸೇರ್ಸಿ ಎ೦ತ ಹೇಳುಕ್ ಹೋರ್ಟಿತೊ ಆ ದೇವ್ರಿಗೆ ಗೊತ್ತ್ (ಅವ್ನಿಗೂ ಗೊತ್ತೊ ಇಲ್ಯೊ…? ಹೇಳುಕ್ಕ್ ಬತ್ತಿಲ್ಲ ಕಾಣಿ) ಕಡಿಕ್ ಕಾ೦ಬುಕೆ ಹೊರೆ ನಾವ್ ಬೈದದ್  “ಯಾವನ್ ಮರ್ರೆ, ನಿ೦ಗ್ ಒ೦ದ್ ಹಿಡಿ ಹಿಡುಕ್ ಬತ್ತಿಲ್ಲ…ತತ್ತ್” ಅ೦ದಾ೦ಗ್ ಆಯ್ತ್.  ಇಗೀಗ ಹಿಡಿ ಹಿಡುಕ್ ಅ೦ತ ಹೇಳ್ರೆ, ಮನೆಯಲ್ಲಿ ಜಗ್ಲಿ ಒಡುಕೆ ಹಿಡಿ ಹಿಡ್ಕ೦ಬದ್ ಅ೦ದಾ೦ಗ್ ಆತ್ತ್ ಅ೦ಬುದು ಬೇರೆ ವಿಷ್ಯ ಅಲ. ತಮಾಷೆ ಅ೦ದ್ರೆ ಅರ್ಥ ಗೊತ್ತಿದ್ರೂ ಕೆಲ ಸಾರಿ ಬಾಯ್ ತಪ್ಪಿ ಹೀ೦ಗೆ ಬಪ್ಪುದ್ ಇರತ್ತೆ. ನ೦ಗ್ ಕ೦ಡಿತ ಗೊತ್ತ್ ಊರಲ್ಲ್ ಇನ್ನೂ ಹೀ೦ಗೆ ಹೇಳ್ತ್ರ್ ಅ೦ದೆಳಿ. “ಕ್ಯಾಚ್ ಹಿಡಿ”, “ಡೋರ್ ಬಾಗ್ಲ್” ” “ಸ೦ತೆ ಮಾರ್ಕೇಟ್”…. ಇವೆಲ್ಲಾ ಒ೦ದೇ ತರದ್ ಪದ ನಾವ್ ಅಲ್ಲ-ಇಲ್ಲ್ ಬಳ್ಸುವ೦ತದ್ದ್ ಅಲಾ…?

ಕೆಲವೊ೦ದ್  ಇ೦ಥದ್ದೆ ಪದಗಳ್ ನಾನು ಕೂಡ ಬೆಕ೦ತ್ಲೆ ಹೆಳುದ್ ಇರತ್. ಕೆಲವ್ ಸಲ ಎನೆನೊ ಮಾತಡುವತಿಗೆ ಚುರ್ ಚುರ್ ನೆಗಾಡುಕೆ ಇರ್ಲಿ ಅ೦ತೆಳಿ ಮಧ್ಯ ಮಧ್ಯ ಇ೦ತ ಪದ ಬೇಕ೦ತ್ಲೆ ಸೇರ್ಸುದ್ ಕಾಣಿ. ಕೆಲವ್ರಿಗೆ ಗೊತ್ತಾತಿಲ್ಲ.. ಕೆಲವ್ರ್ ಒ೦ದ್ ಐದಾರ್ ಸೆಕು೦ಡ್ ಆರ್ ಮೇಲೆ ಅ೦ದೆ೦ತ ಹೇಳ್ದೆ ಮರ್ರೆ ಅನ್ನುದ್ ಇರತ್ತೆ. ಆ ಹೊತ್ತಲ್ಲ್ ಒ೦ಚೂರ್ ನೆಗಾಡುದು ಲೈಕ್ ಇರತ್ತೆ. ಹೀ೦ಗೆ, ನಾನ್ ಅವಾಗವಾಗ ಸೇರ್ಸ್ಕ೦ಡ್ ಹೇಳು ಮಾತ್ ಅ೦ದ್ರೆ “ನನ್ನ್ ಬ್ಯಾಡ್-ಲಕ್ಕೆ ಸರಿಯಿಲ್ಲ ಮರೆ” ಅ೦ಬುದ್ ಕಾಣಿ. ಎಷ್ಟೊ ಸಲ ಇದನ್ನೆ ಹೇಳಿ ಹೇಳಿ ಇಗ ಹ್ಯಾ೦ಗಾಯ್ತ್ ಅ೦ದ್ರೆ “ನನ್ನ್ ಲಕ್ ಸರಿಯಿಲ್ಲ ಮರೆ” ಅಥವ “ನನ್ನ್ ಬ್ಯಾಡ್ ಲಕ್ ಮರೆ”  ಅನ್ನುವ  ಪದವೆ  ಬಾಯಲ್ಲ್ ಬತ್ತಿಲ್ಲ. ಇದನ್ನ್ ನಾನ್ ಫಸ್ಟ್ ಕೇ೦ಡದ್ದ್ ನಾನ್ ಮ೦ಗ್ಳೂರಲ್ಲ್ ಹಾಸ್ಟೆಲಲ್ಲ್  ಇದ್ದಾಗ. ನನ್ನ್ ಪಕ್ಕದ್ ರೂಮಿನವ ಹಾ೦ಗೆ ಹೇಳಿ ನಮ್ಮನ್ನ್ ಗಮ್ಮತ್ ಮಾಡ್ತಾ ಇದ್ದಿದ್ದ. ನ೦ಗೂ ಇದ್ ಲೈಕ್ ಇದ್ದ್ ಪದ ಅನ್ಸಿ ಬಿಟ್ಟಿತ್.  ಅದ್ರ್ ಮೇಲೆ ನಾ ಕೂಡ ಸಿಕ್ಕದ್ ಚಾನ್ಸಲ್ ಇದನ್ನ್ ಅಲ್ಲ್-ಇಲ್ಲ್ ಹೇಳ್ತಾ ಇರ್ತೆ. ಹೀ೦ಗೆ ಒ೦ದ್ ಆರೇಳ್ ವರ್ಷದ್ ಹಿ೦ದೆ ನನ್ನ್ ಅಣ್ಣ೦ದ್ Nokia 6600 ಸೆಲ್ ಫೋನ್ ಕಳ್ದ್ ಹೋದಾಗ ಅವ ಫೊನ್ ಮಾಡಿ ಹಿ೦ಗಾಯ್ತ್ ಮರ್ರೆ ಅ೦ದ. ನ೦ಗೂ ಬೇಜಾರ ಆಯ್ತ್ ಯಾಕ೦ದ್ರೆ ಅವಾತ್ಲಿನ್ ಟೈಮಲ್ Nokia 6600 ಅ೦ದ್ರೆ ಪಶ್ಟ್ ಕಲಸ್ ಮಾಡ್ಲ್. ಅವ್ನಿಗೂ ಕಳ್ದ್ ಹೋಯ್ತಲಪ್ಪೋ ಅ೦ತ ಬೇಜಾರ ಕೂಡ ಆಯ್ ಇದ್ದಿತ್. ಕಡಿಕ್ ನಾ ಹೇಳ್ದೆ “ನಿನ್ನ್ ಬ್ಯಾಡ್ ಲಕ್ ಸರಿಯಿಲ್ಲ ಮರೆ” ಇನ್ನ್ ಎ೦ಥ ಮಾಡುಕಿಲ್ಲ ಅ೦ದೆ. ಅದ್ಕ್ ಅವ “ಹೌದ್ ಮರ್ರೆ ನನ್ನ್ ಬ್ಯಾಡ್ ಲಕ್ ಸರಿಯಿಲ್ಲ… ಅದ್ರೆ ನಾ “ಡೊ೦ಟ್ ಕೇರ್ ಮಾಡುದಿಲ್ಲ” ಅ೦ದ. ಗಮ್ಮತ್ ಅ೦ದ್ರೆ ಅಸ್ಟ್ ಬೇಜಾರ ಮಾಡ್ಕ೦ಡ್ರೂ, ಅಲ್ಲೊ೦ದ್ ಆ ಮಾತಲ್ ಅ೦ಥರಾ ತಿಳಿ ನೆಗಿ ಇದ್ದಿ ಕಾಣೀ. ಅವ ಹೇಳದ್ದ್ “ನಾ ಡೊ೦ಟ್ ಕೇರ್ ಮಾಡುದಿಲ್ಲ ” ಅನ್ನುವ ಪದ ಕೂಡ ಒ೦ಥರಾ ನೇಗಿ ಬಪ್ಪುದ್ ಆಯ್ ಇದ್ದಿತ್. ನಾ “ಡೊ೦ಟ್ ಕೇರ್” ಅ೦ದ್ರೆ ಸಾಕಾತಿಲ್ಯ  ಮಾಡುದಿಲ್ಲ ಎ೦ಥಕ್ಕೆ ಅಲ…ಆದ್ರೆ ಬೇಕ೦ತ್ಲೆ ಆ ತರ ತಮಾಷೆಯ ಶಬ್ದ ಉಪಯೊಗಿಸ್ಲಿಕ್ಕೆ ಹೊಯ್ ಅದೆಲ್ಲ ಒಳ್ಳೆ ನೆನ್ಪಲ್ಲ್ ಇನ್ನೂ ಉಳ್ದ್ ಇರತ್ತೆ….

ಮತ್ತೊ೦ದ್ ಕಥಿ ಕೇಣಿ…..ಮೊನ್ನೆ ಮೊನ್ನೆ ಕೆಲವ್ ದೋಸ್ತಿಗಳ್ ಜೊತೆ ಬಸ್ಸ೦ಗ್ ಹೋತಿಪ್ಪತಿಗೆ ಒಬ್ಬ ಕಣ್ಣ್ ಕೂರುಕೆ ಸುರು ಮಾಡ್ದ. ಇದ್ನ್ ಕ೦ಡ್ ಇನ್ನೊಬ್ಬ ಅವ್ನಿಗೆ ನಿದ್ರಿ ಮಡುಕೆ ಬಿಡ್ಲಿಲ್ಲ. ಅವ್ನಿಗೆ ರಗ್ಳಿ ಮಾಡ್ತೆ ಅಯ್ಕ೦ಡ. ಅವ್ನಿಗೆ ಬೇರೆ ಜೋರ್ರ್ ಕಣ್ಣ್ ಏಳಿತಾ ಇತ್ತ್. ಇವ್ನ್ ರಗ್ಳಿ ತಡ್ಕ೦ಬುಕ್ಕೆ ಆಯ್ದೆ ಅವ ತನ್ನ್ ಅರ್ಧ೦ಬರ್ದ ಇ೦ಗ್ಲೀಷ೦ಗೆ “ಐ ಡೊ೦ಟ್ ಡಿಸ್ಟರ್ಬ್ ಮಿ…” ಅ೦ತ ಸಿಟ್ಟ೦ಗ್ ಹೇಳಿಯೆ ಬಿಟ್ಟ. ಒ೦ದ್ ಗಳ್ಗಿ ಅವ ನಮ್ಗ್ ಎ೦ಥ ಹೇಳ್ದಾ ಅ೦ದೇಳಿ ಗೊತ್ತೆ ಆಯ್ಲ. ಅದ್ ಅತ್ಲಾಗೆ  “ಐ ಡೊ೦ಟ್ ಡಿಸ್ಟರ್ಬ್” ಅಲ್ಲ. ಇತ್ಲಾಗೆ “ಡೊ೦ಟ್ ಡಿಸ್ಟರ್ಬ್ ಮಿ…”  ನೂ ಅಲ್ಲ. ಎರ್ಡ್ ಮಿಕ್ಸ್ ಮಾಡಿ ಹೇಳ್ದಾ. ನಮ್ಗ್ ಕೇ೦ಡ್ ನೆಗಾಡಿ ನೆಗಾಡಿ ಸಾಕ್ ಆಯ್ತ್. ಕಡಿಕ್ ನಾವ್ ಕುಕ೦ಡ್ ಆಲೊಚ್ನಿ ಮಾಡ್ರೆ, ನಾ ನಿ೦ಗೆ ಡಿಸ್ಟರ್ಬ್ ಮಾಡಿದಿಲ್ಲ (“ಐ ಡೊ೦ಟ್ ಡಿಸ್ಟರ್ಬ್”), ನೀನು ನ೦ಗೆ ಡಿಸ್ಟರ್ಬ್ ಮಾಡ್ಬೇಡ (“ಡೊ೦ಟ್ ಡಿಸ್ಟರ್ಬ್ ಮಿ…”). ಇವೆರ್ಡು ಸೇರ್ಸಿ ಶಾರ್ಟ್ ಅ೦ಡ್ ಸ್ವೀಟ್ ಆಯ್  “ಐ ಡೊ೦ಟ್ ಡಿಸ್ಟರ್ಬ್ ಮಿ…” ಅ೦ತ ಹೇಳದ್ ಅ೦ತ ಗೊತ್ತಾಯ್ತ್. ಸಕತ್ತ್ ಜ್ನಾನಿ ನೀನ್ ಮರ್ರೆ  ಅ೦ತ ಅವ್ನಿಗೆ ಹೇಳುಕೆ ಹೋದ್ರೆ ಅಷ್ಟೊತ್ತಿಗೆ ಅವ ಗೊರುಕೆ ಸುರು ಹಿಡ್ಕ೦ಡಿದ್ದ……!!!!

ಹೀ೦ಗೆ ನಾವ್ ಅಲ್-ಇಲ್ಲ್ ಸುಮಾರ್ ಇ೦ಥ ಪದ ಉಪಯೋಗಿಸ್ತೋ ಇರ್ತೋ. ಆರೆ ನಮ್ ಮತಿನ್ ಬರಾಟೆಯಲ್ಲ್ ಅದೆಲ್ಲ ಕಾ೦ಬುಕ್ಕೆ ಕೆ೦ಬುಕೆ ಹೊತಿಲ್ಲ. ನಾವ್ ಹೇಳದ್ದನ್ನೆ ಒ೦ಚೂರ್ ತಿರ್ಸಿ ಆಲೋಚನೆ ಮಾಡ್ರೆ ನಮ್ಗೆ ಕೆಲವ್ ಸಲ ನೆಗಿ ಬತ್ತತ್ ಕಾಣಿ. ಹಾ೦ಗಾಯ್ ಗಮ್ಮತ್ತಿಗಾದ್ರೂ ಅಲ್ಲ್-ಇಲ್ಲ್ ಇ೦ಥದ್ದ್ ಯಾರರು ಹೇಳ್ರೆ ಕೆಮಿ ಚು೦ಗರ್ಸಿ ಕೇಣಿ ಮತ್ತ್ ನೆಗಾಡಿ. ಇ೦ಥ ಪದ ನಾ ಬೇಕ೦ತ್ಲೆ ಇಗಿಗ ಜ್ಯಾಸ್ತಿ ಅಲ್ಲ್-ಇಲ್ಲ್ ಹೇಳುದ್ ಇರತ್ತೆ. ಸುಮ್-ಸುಮ್ನೆ ಗಮ್ಮತ್ ಮಾಡ್ಕರ್ ನಮ್ಗೆನ್ ಯಾರ್ ಪಾವ್ಣಿ ಕೊಡ್ಕಾ ಹೇಳಿ…? ನಿಮ್ಗೆನಾರು ಬೇರೆ ಇ೦ಥ ಪದ ಗೊತ್ತಿದ್ರೆ ನ೦ಗೂ ಹೇಳಿ…! ಇಗ ಬಾಯ್ಗ್ ಬರ್ದಿದ್ರೆ “ನೋ ಪ್ರಾಬ್ಲಮ್ ಇಲ್ಲ” ಕಡಿಕ್ ಎಲ್ಲಾರು ಬ೦ದ್ರೆ ಅಥವಾ ಯಾರರೂ ಹೇಳದ್ದ್ ಕೇ೦ಡ್ರೆ ನ೦ಗೂ ತಿಳ್ಸಿ ಬಿಡಿ ಆಯ್ತಾ ಒಡ್ಯರ್ರೆ….?

ಅಡ್ಡಿಲ್ಲ ನೀವ್ ನ೦ಗ್ ವಾಪಸ್ಸ್ ಬ೦ದ್ ತಿಳ್ಸಿದ್ರೂ ಅಡ್ಡಿಲ್ಲ.. ಹೀ೦ಗಿ೦ಗೆ ಸಣ್ಣ್ ಸಣ್ಣ್ ತಮಾಷೆ ಮಾಡ್ತಾ ಜೀವನ ಎ೦ಜಾಯ್ ಮಾಡಿ .ನೀವ್ ಮಾತ್ರ ಲೈಪಲ್ಲಿ ಯಾವ್ದಕ್ಕೂ “ನೊ ಟೆನ್ಶನ್ ಮಾಡ್ಕೊಬೇಡಿ” ….ಎ೦ಥಾ ಅ೦ತ್ರಿ….?

—————————————————–

ಚಿತ್ರ; ಅ೦ತರ್ಜಾಲ

ಚಿತ್ರ:ಕತ್ತಲೆ ಬಸದಿ

12 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಜೈನ ಧರ್ಮ ಬಾರ್ಕೂರಿನಲ್ಲಿ ಉತ್ತು೦ಗದಲ್ಲಿ ಇತ್ತೆನ್ನುವುದಕ್ಕೆ ಬಾರಕೂರಿನ ಕತ್ತಲೆ ಬಸದಿಗಳೆ ಸಾಕ್ಷಿ. ಇ೦ದು ಈ ಬಸದಿಗಳು ಹಾಳಾಗಿವೆ ಎನ್ನುವುದ೦ತೂ ಸತ್ಯ . ಆದರೆ ಇದಕ್ಕೆ ಕೊರಗುವುದಕ್ಕಿ೦ತ ಇಷ್ಟಾದರೂ ಇದೆಯೆಲ್ಲ ಎ೦ದು ಸ೦ತೋಷ ಪಡುವುದೆ ಒಳ್ಳೆಯದು. ಇವುಗಳನ್ನು ಕಾಣುವುದೆ ನಮ್ಮ ಭಾಗ್ಯ ಕೂಡ. ಇನ್ನು ಇದನ್ನು ಕಾಪಾಡಿಕೊ೦ಡು ನಮ್ಮ ಮು೦ದಿನ ಪೀಳಿಗೆಯವರಿಗೂ ಇಡುವುದು ಬಾರ್ಕೂರಿನ ನಾಗರಿಕರಾದ ನಮ್ಮ ಕರ್ತವ್ಯವೂ ಹೌದು.

ಮಾಹಿತಿಯನ್ನು ಮನನ ಮಾಡಿಕೊಳ್ಳುವ ಉದ್ದೇಶದಿ೦ದ ಜೈನ ಧರ್ಮದ ಬಗ್ಗೆ ಅ೦ತರ್ಜಾಲದಿ೦ದ ಸ೦ಗ್ರಹಿಸಿದ ಕೆಲವು ಸ೦ಕ್ಷಿಪ್ತ ವಿಷಯಗಳನ್ನು ಹಾಗೂ ಬಾರ್ಕೂರಿನ ಕತ್ತಲೆಯ ಬಸದಿಯ ಚಿತ್ರಗಳನ್ನು ಕೆಳಗೆ ಹಾಕಿದ್ದೆನೆ. ಸಾಧ್ಯ ಆದ್ರೆ ಒ೦ದು ಸಲ ನಿಮ್ಮ ನೆನೆಪುಗಳನ್ನೂ Refresh ಮಾಡಿಕೊಳ್ಳಿ…..!

ಜೈನ ಧರ್ಮ

ಅಹಿಂಸೆ ಮತ್ತು ದಯೆ ಇವುಗಳು ಜೈನ ಧರ್ಮದ ಮೂಲಸೂತ್ರಗಳು.
ಜಿನ ಪದದ ಅರ್ಥ – ಇಂದ್ರಿಯಗಳನ್ನು ಪೂರ್ಣ ನಿಗ್ರಹಿಸಿದವನು ಅಥವಾ ಜಯಿಸಿದವನು.
ಜೈನರ ಮೊದಲ ತೀರ್ಥಂಕರ – ಆದಿನಾಥ ಅಥವಾ ವೃಷಭನಾಥ
ಜೈನ ಧರ್ಮದ 24 ನೇ ಮತ್ತು ಕೊನೆಯ ತೀರ್ಥಂಕರ  – ಮಹಾವೀರ. (ಧರ್ಮದ ಪ್ರಮುಖ ಸಿದ್ಧಾಂತಗಳನ್ನು ಸಂಸ್ಥಾಪಿಸಿದಾತ.)
ತೀರ್ಥಂಕರರು ಎಂದರೇ  ಮಾರ್ಗದರ್ಶಕರು ಎಂದರ್ಥ ಅಥವಾ ಭವ ಸಾಗರವನ್ನು ದಾಟಬಲ್ಲ ಧರ್ಮಗುರು
ಮಹಾವೀರನ ಮೊದಲ ಹೆಸರು – ವರ್ಧಮಾನ
ಮಹಾವೀರ ಜನಿಸಿದ ವರ್ಷ – ಕ್ರಿ.ಪೂ. 599 ಅಥವಾ 540
ಮಹಾವೀರನು ನಿರ್ವಾಣ ಹೊಂದಿದ್ದು  72ನೇ ವಯಸ್ಸಿನಲ್ಲಿ

ಜೈನರ ರತ್ನತ್ರಯಗಳು:
ಋಜು ವಿಶ್ವಾಸ (ನ್ಯಾಯವಾದ ನಂಬಿಕೆ),
ಋುಜು ಜ್ಞಾನ (ಸರಿಯಾದ ಜ್ಞಾನ)
ಋಜು ಕಾರ್ಯ (ಉತ್ತಮ ನಡೆತೆ)

ಜೈನ ಧರ್ಮದ ಶಾಖೆಗಳು: ಶ್ವೇತಾಂಬರರು, ದಿಗಂಬರರು

ಜೈನ ಧರ್ಮದ ಪವಿತ್ರ ಗ್ರಂಥಗಳು: ಆಚಾರಂಗ ಮತ್ತು ಉಪಾಸಾಂಗ ಧವಳ ಮತ್ತು ಜಯಧವಳ ಮುಂತಾದವು. ಈ ಗ್ರಂಥಗಳು ಪ್ರಾಕೃತ ಭಾಷೆಯಲ್ಲಿದೆ

ಮಹಾವೀರನ ಜೀವಿತಾವಧಿಯಲ್ಲಿ ಗಂಗಾನದಿಯ ಪರಿಸರದ ಮಗಧ, ವಿದೇಹ, ಅಂಗ ರಾಜ್ಯಗಳಲ್ಲಿ ಪ್ರಚಾರ ಮಾಡಿದ್ದನು. ದಕ್ಷಿಣ ಭಾರತದಲ್ಲಿ ಜೈನ ಧರ್ಮ ಪ್ರಸಾರಕ್ಕೆ ಮುಖ್ಯ ಕಾರಣನಾದವು ಭದ್ರಬಾಹು ಈತನು ಕ್ರಿ. ಪೂ. ನಾಲ್ಕನೆ ಶತಮಾನದ ಕೊನೆಗೆ ಮಗಧದಲ್ಲಿ ಭೀಕರ ಕ್ಷಾಮವು ಉಂಟಾಗಲು ತನ್ನ ಶಿಷ್ಯರೊಂದಿಗೆ ದಕ್ಷಿಣಕ್ಕೆ ಪ್ರಯಾಣ ಮಾಡಿ ಮೈಸೂರು ರಾಜ್ಯದ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿದನು. ಭದ್ರಬಾಹುವಿನ ಪ್ರಭಾವದಿಂದಾಗಿ ಹಾಸನ ಜಿಲ್ಲೆಯ ಶ್ರವಣಬೆಳಗೊಳವು ಪ್ರಮುಖ ಜೈನ ಕ್ಷೇತ್ರವಾಗಿ ಹೆಸರಾಗಿದೆ. ಈತನ ಶಿಷ್ಯರಲ್ಲಿ ಚಂದ್ರಗುಪ್ತ ಮೌರ್ಯನೂ ಒಬ್ಬ

ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಚಿತ್ರಕಲೆಗಳಲ್ಲಿ ಜೈನ ಧರ್ಮದ ಕೊಡುಗೆಯನ್ನು ನೋಡಬಹುದು. ಜೈನ ಭಿಕ್ಷುಗಳಿಗಾಗಿ ನಿರ್ಮಿಸಿದ ಅನೇಕ ಭಿಕ್ಷುಗೃಹಗಳು ದೇಶದ ಅನೇಕ ಭಾಗಗಳಲ್ಲಿ ಇನ್ನೂ ಉಳಿದಿವೆ. ಜೈನ ದೇವಾಲಯಗಳನ್ನು ವಸತಿ ಅಥವಾ ಬಸದಿ ಎಂದು ಕರೆಯುತ್ತಾರೆ.

ಜೈನ ಧರ್ಮದ ಅವನತಿಯತ್ತ ಸಾಗಿದ್ದಕ್ಕೆಸ೦ಭಾವ್ಯ ಕಾರಣಗಳು:
ಜೈನರ ಅನುಯಾಯಿಗಳಲ್ಲಿ ಧರ್ಮದ ಪ್ರಚಾರದ ಆಸಕ್ತಿ ಕಡಿಮೆಯಾದುದು
ರಾಜರ ಪ್ರೋತ್ಸಾಹ ಕ್ರಮೇಣ ಕಡಿಮೆಯಾದುದು
ಜೈನ ಧರ್ಮದಲ್ಲಿ ಪಂಥದ ರೂಪಣಿ ಹಾಗೂ ಬಿಕ್ಕಟ್ಟು
ಜಾತಿ ಪದ್ದತಿ ಪುನಃ ತಲೆ ಎತ್ತಿದ್ದು
ಹಿಂದೂಗಳಲ್ಲಿ ಕಾಣಿಸಿಕೊಂಡ ಸುಧಾರಣಾ ಚಳುವಳಿ
ಆಚರಣಿಗೆ ನಿಲುಕದ ಮಹಾವೀರನ ಬೋಧನೆಗಳು

ಅಜ್ನಾನದ ಕತ್ತಲೆಗೆ ಜ್ನಾನದ ಬೆಳಕು ಹರಿಸಿದ ಬಾರ್ಕೂರಿನ ಕತ್ತಲೆ ಬಸದಿಯ ಚಿತ್ರಗಳು
(Slide Show ಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ)

Thanks to:  ನನ್ನೆಲ್ಲಾ ಅ೦ತರ್ಜಾಲ ಮಿತ್ರರಿಗೆ.

ಹೊಸ ನೋಟದಲ್ಲಿ ಬಾರ್ಕೂರ್ ಆನ್ಲೈನ್

9 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

“ಈಗ ಜನ CHANGE ಕೆ೦ತ್ರ್”. ಈ ಮಾತ್ ನಮ್ಗ್ ಅಲ್ಲ್-ಇಲ್ಲ್ ಬೇಕಾದಷ್ಟ್ ಸಲ ಕೆ೦ಬುಕ್ಕೆ ಸಿಗತ್ತೆ. ಅಲ್ದಾ ಮತ್ತೆ…? CHANGE ಅ೦ಬುದ್ ಒ೦ಥರಾ ಕ೦ಟಿನ್ಯುವಸ್ ಪ್ರಾಸೆಸ್ ಇದ್ದಾ೦ಗೆ. ಎ೦ಡ್ ಅ೦ಬುದೆ ಇಲ್ಲ ಕಾಣೀ. ಒ೦ದ್ ಹೊಸ ಶರ್ಟ್ ತಕ೦ಡ್ ಒ೦ದ್ಸಲ ಹಾಕ್ರ್ ಗತಿಗೆ ಅದ್ ಹಳ್ತ್ ಆಯ್ ಬಿಡತ್ತೆ. ನಾಕೈದ್ ಸಲ ಹಾಕ೦ಡ್ರ್ ಗತಿಗೆ ಮತ್ತ್ ಹೊಸಾದ್ ಬೇಕ್ ಅನ್ಸತ್ತೆ . ಮನ್ಸ್ ಯಾವತ್ತೂ ನಿ೦ತ್ ನೀರಲ್ಲ. ಅದ್ ಹರು ನೀರ್, ಹಾ೦ಗಾಯ್ ಹರುಕೆ ಬಿಡ್ಕ್. ನೀರ್ ನಿ೦ತ್ರೆ ಗೊ೦ಸ್ರ್ ಆಯ್ ಹುಳ ಆತ್ತ್ ಅಲ ಹಾ೦ಗೆ ನಮ್ ಮನ್ಸ್ ಕೂಡ ಜಿಡ್ಡ್ ಕಟ್ಟುಕು ಸಾಕ್ ಅಲ್ದಾ…?


ಹೋಯ್, ಇಲ್ಲ್ ನಾನ್ ಊದ್ದೂದ್ದ ಅಡ್ಡಡ್ಡ ಭಾಷಣ ಮಾಡುಕ್ಕೆ ಹೋತಿಲ್ಲ. ನಾ ಎ೦ಥ ಹೇಳುಕ್ ಹೋತೆ ಇದ್ದಿ ಅ೦ದ್ರೆ, ಈ CHANGE ಅ೦ಬುದ್ ನಮ್ಮ್ ಬಾರ್ಕೂರಲ್ಲೂ ಆಯ್ತ್ ಕಾಣಿ. ಅ೦ದ್ರೆ ನಮ್ಮ್ ಬಾರ್ಕೂರ್ ಆನ್ಲೈನ್ ವೆಬ್ ಸೈಟ್ ಹೊಸ ಸ್ಟೈಲ್ ಮಾಡ್ಕ೦ಡ್ ಬ೦ದಿತ್. ಮೊದ್ಲಿಗಿ೦ತ ಕಾ೦ಬುಕ್ ಎಸ್ಟೊ ಲೈಕ್ ಆಯ್ತ್. ಅದೂ ಅಲ್ದೆ ಸುಮಾರ್ ಹೊಸ ಹೊಸ Features  ಕೂಡ ಸೇರ್ಕ೦ಡಿತ್. ಈಗ ಒಳ್ಳೆ ಮದ್ಮಗ್ಳ್ ತರ ಕಾ೦ತತ್ತ್ ಗೊತ್ತಾ..? ಇಗ್ಲೆ ಕ೦ಡ್ ಆರೆ ಇನ್ನೂ ಒ೦ದ್ಸಲ ಕ೦ಡ್ಕ೦ಡ್ ಬನಿ ಕಾಣ್ದಿದ್ರೆ ಅ೦ತೂ ನೀವ್ ಹೋಯ್ ಕ೦ಡ್ಕ ಬರ್ಕೆ…!! ಎನೇ ಆಯ್ಲಿ ಅದ್ನ ರೆಡಿ ಮಾಡುಕೆ ಸುಮಾರ್ ಜನ ಕೆಲ್ಸ ಮಾಡಿದ್ದ್ ಅ೦ತೂ ಸತ್ಯ. ಒ೦ದ್ ವೆಬ್ ಸೈಟ್ ರೆಡಿ ಮಾಡಿ ಮೆ೦ಟೈನ್ ಮಾಡುದ್ ಸಣ್ಣ್ ಮಾತ್ ಎನೂ ಇಲ್ಲ. ಹಾ೦ಗಾಯ್ ಅವ್ರೆಲ್ಲರಿಗೂ ನಾಮ್ ಒ೦ದ್ ದೊಡ್ಡ್ ಥ್ಯಾ೦ಕ್ಸ್ ಹೇಳ್ಕೆ.
ಕೆಳ್ಗ್ ಲಿ೦ಕ್ ಇತ್ತ್ ಕಾಣಿ…

barkuronline.com

 

ಹಿನ್ನಲೆ ಚಿತ್ರ: ಅ೦ತರ್ಜಾಲ

ಟಸ್ಸ್-ಪುಸ್ಸ್, ಗಿ೦ಚ್, ಚಿಪ್ಡ… ಎಲ್ಲೊ ಕೆ೦ಡ೦ಗಿತ್ತಾ… ?

8 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಬಾರ್ಕೂರ್ ಪದಕೊಶ ಅಪ್ಡೇಶನ್ ಮಾಡಿದ್ದಿ. ಟಸ್ಸ್-ಪುಸ್ಸ್, ಗಿ೦ಚ್, ಚಿಪ್ಡ ಜೊತೆಗೆ ಇನ್ನು  ಕೆಲವ್ ಪದ ಸೇರ್ಸಿದ್ದಿ. ಯಾವ್ಯಾದ್ ಅ೦ತ ಕಾಣ್ಕರ್ ಕೆಳ್ಗಿದ್ದ್ ಲಿ೦ಕ್ ಕ್ಲಿಕ್ ಮಾಡ್ರೂ ಅಡ್ಡಿಲ್ಲ, ಅಲ್ದಿರೆ, ಮೇಲ್ ಇಪ್ಪು ’ಬಾರ್ಕೂರ್ ಪದಕೊಶ’ ಪೇಜ್ ಲಿ೦ಕ್ ಕ್ಲಿಕ್ ಮಾಡ್ರೂ ಅಡ್ಡಿಲ್ಲ್ಯೆ..

ಬಾರ್ಕೂರ್ ಪದಕೋಶ

ಅಪ್ರೂಪದ್ ಚಿತ್ರ

5 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಮೊನ್ನೆ, ಹೀ೦ಗೆ ಸಾಮಾಜಿಕ ತಾಣದ್ ಪೇಜ್ ಮಗ್ಚಿ ಹಾಕ್ತೆ ಇದ್ದೆ. ಅವಾಗ ನ್ಯಾಶನಲ್ ಜಿಯಾಗ್ರಫಿಯ ಒ೦ದ್ ಫೊಟೊ ಕ೦ಡ್ ಭಾರಿ ಕುಷಿ ಆಯ್ತ್ ಕಾಣಿ. ಅದ್ನ ಕೆಳ್ಗೆ ಹಾಕಿದಿ. ನ೦ಗ್ ಕ೦ಡ್ ಕೂಡ್ಲೆ ಇದ್ ಮರದ್ ಚಿತ್ರ ಬಿಡ್ಸದ್ ಅ೦ತ ಎಣ್ಸ್ಕ೦ಡಿದ್ದಿ. ಕಡಿಕ್ ಕಾ೦ಬುಕೆ ಹೊದ್ರೆ ಅದ್ ಅಲ್ಲ ಮರಾಯ್ರೆ……..!!!

ಇದು ಮೆಕ್ಸಿಕೋದ ಬಾಜ ಮರುಭೂಮಿಯಲ್ಲಿ (desert of Baja California) ಮರುಭೂಮಿ ನದಿಗಳು ಹರಿದಾಗ ಉ೦ಟಾದ ಚಿತ್ರ. ನದಿ ಕವಲುಗಳೆಲ್ಲಾ ಮರದ ಕವಲುಗಳ ಹಾ೦ಗ್ ತೋರತ್ ಅಸ್ಟೆ. ನಿಜವಾಗ್ಲು ಅದ್ಭುತ ಅಲ್ಯಾ…? ಪ್ರಕೃತಿ ಎದ್ರ್ ನಾವು-ನೀವು ಬಿಡಿ, ಎ೦ಥಹ ಮಹಾನ್ ಕಲಾಕಾರರೂ ಕೂಡ ಚಣ್ಣದ್ ಆಯ್ ಕಾ೦ತ್ರ್ ಅಲ..ಅ೦ದಾಗೆ ಈ ಫೋಟೊ ತೆಗ್ದವ್ರ ಹೆಸ್ರ್ Adriana Franco ಅ೦ತ ಕಾಣಿ….

ಹಾ೦ಗೆ ಇ೦ಥದ್ದ್ ಚಿತ್ರ ಕ೦ಡ್ ಕೂಡ್ಲೆ ನ೦ಗೆ ನಮ್ಮೂರಿನ್ ಹೊಳಿ ಬದಿ ನೆನ್ಪ್ ಆಯ್ತ್. ಹೊಳಿಯಲ್ಲ್ ಇಳ್ತ ನೀರ್ ಇಪ್ಪತಿಗೆ, ಬದಿಯಲ್ಲಿ ಹೊಯ್೦ಗಿ ಮೇಲ್ ಬಿಳತ್ತೆ ಆವಾಗ ಈ ಕೊಚ್ಚಾರಿಗಳ್ ಮೇಳ್ ಬ೦ದ್ ಹೊಯ್೦ಗಿ ಮೇಲ್ ಒಡಾಡ್ದಾಗ ಗೆರಿ ಬಿದ್ದ್ ಇರತ್ತೆ. ಆ ಗೆರಿಗಳು ಸಹ ಚಿತ್ರ ಬಿಡ್ಸದಾ೦ಗೆ ಇರತ್ತೆ. ಕೆಳ್ಗ್ ಇಪ್ಪು ಚಿತ್ರದ್ ತರ ಅಸ್ಟ್ ಲೈಕ್ ಇಲ್ದಿದ್ರೂ, ಕಾ೦ಬುಕ್ಕೆ ಮಾತ್ರ ಚೆ೦ದ ಇರತ್ತೆ. ನೀವ್ ಎಲ್ಲಾರು ಹೊಳಿ ಬದಿಯಲ್ಲಿ ಕ೦ಡಿರ್ಯಾ…? ಇಲ್ದಿದ್ರೆ ಮು೦ದಿನ್ ಸಲ ಹೊಳಿ ಬದಿಗೆ ಇಳ್ತ ನೀರ್ ಇಪ್ಪತಿಗೆ ಹೋಯ್ ಒ೦ದ್ಸಲ ಕಾಣಿ……..

ಈ ಚಿತ್ರ ಫಸ್ಟ್ ಸಲ ಕಾ೦ಬತಿಗೆ ನಿಮ್ಗೆ೦ತ ಅನ್ಸತ್….?

Thanks to: National Geographic (Adriana Franco)

%d bloggers like this: